ಮೋಡ ಕವಿದ ವಾತಾವರಣ ಚಿತ್ರದ ಪೋಸ್ಟರ್​ 
ನ್ಯೂಸ್

moda kavida vathavarana movie review: ಹದವಾದ ಮಳೆಯಲ್ಲಿ ಬೆಚ್ಚನೆಯ ಪ್ರೀತಿ

ಪ್ರಮುಖ ಮುಖ್ಯಾಂಶಗಳು

  • ಸುನಿ ನಿರ್ದೇಶನದ ಹಿಂದಿನ ಸಿನಿಮಾಗಳ ಶೈಲಿ ಮುಂದುವರಿಕೆ
  • ಕಥೆಯಲ್ಲಿ ಕೊಂಚ ವಿಭಿನ್ನತೆ ಕಾಯ್ದುಕೊಂಡ ನಿರ್ದೇಶಕ ಸುನಿ
  • ಮೂವರು ಹೊಸ ಕಲಾವಿದರಿಂದ ಅದ್ಭುತ ಅಭಿನಯ
ಚಿತ್ರ: ಮೋಡ ಕವಿದ ವಾತಾವರಣ
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ಶೀಲಂ ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ ರಾವ್, ರಿಷಿ ಮತ್ತಿತರರು
ರೇಟಿಂಗ್: 3.5
ಶಿವ ಸ್ಥಾವರಮಠ
ತಂಪಾದ ಮಳೆ, ಇಂಪಾದ ಸಂಗೀತ, ನಯನ ಮನೋಹರವಾದ ಮಲೆನಾಡು ಸೌಂದರ್ಯ, ಇವುಗಳ ಮಧ್ಯೆ ಒಂದು ತ್ರಿಕೋನ ಪ್ರೇಮ. ಕಚಗುಳಿ ಇಡುವ ಸಂಭಾಷಣೆ, ಅಷ್ಟೇ ಕಚಗುಳಿ ಇಡುವ ಕಲಾವಿದರ ನಟನೆ... ಇಷ್ಟು ಸಾಕು ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ನೋಡಲು. ಸುನಿ ನಿರ್ದೇಶನದ ಹಿಂದಿನ ಸಿನಿಮಾಗಳ ಶೈಲಿ ಇಲ್ಲಿಯೂ ಮುಂದುವರಿದಿದ್ದು, ಕಥೆಯಲ್ಲಿ ಕೊಂಚ ವಿಭಿನ್ನತೆ ಸಾಧಿಸಿದ್ದಾರೆ.
ಮನಃಶಾಸಜ್ಞ ಚೆರಿಶ್ (ಶೀಲಂ) ಮತ್ತು ಪ್ರಿಯತಮೆ ಸಾತ್ವಿಕಾ (ಸಾತ್ವಿಕಾ) ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಮಲೆನಾಡ ಬೈನೇಕಾಡು ರೆಸಾರ್ಟ್‌ಗೆ ಬರುತ್ತಾರೆ. ನಿಶ್ಚಿತಾರ್ಥ ಮಾಡಿಕೊಂಡ ಮತ್ತೊಂದು ಜೋಡಿ ಸೌಪರ್ಣಿಕಾ (ಮೋಕ್ಷಾ) ಮತ್ತು ದೇವ್ ಕೂಡ ಅದೇ ರೆಸಾರ್ಟ್‌ಗೆ ಬರುತ್ತಾರೆ. ಅಲ್ಲಿ ಚೆರಿಶ್‌ಗೆ ಸೌಪರ್ಣಿಕಾ ಪರಿಚಯವಾಗಿ, ಇಬ್ಬರು ರೆಸಾರ್ಟ್ ಸುತ್ತಾಡಲು ತೆರಳುತ್ತಾರೆ. ಈ ಸುತ್ತಾಟದಲ್ಲಿಯೇ ತಮ್ಮ ಹಿನ್ನೆಲೆ, ಮುನ್ನೆಲೆಯ ಲವ್, ಲೈಫ್​ ಸ್ಟೋರಿ ಹೇಳಿಕೊಳ್ಳುತ್ತಾರೆ. ಹೀಗಿರುವಾಗಲೇ, ಸೌಪರ್ಣಿಕಾಗೆ ಹಿಂದಿನಿಂದಲೂ ಕಾಟ ಕೊಡುತ್ತಿದ್ದ ಅಪರಿಚಿತ ಇಲ್ಲಿಯೂ ಅದನ್ನು ಮುಂದುವರಿಸುತ್ತಾನೆ. ಅಲ್ಲಿಯವರೆಗೆ ಹಾಸ್ಯ, ಹರಟೆಯಲ್ಲಿ ಸಾಗುತ್ತಿದ್ದ ಕಥೆಯ ದಿಕ್ಕು ಒಂದೇ ಕ್ಷಣದಲ್ಲಿ ಬದಲಾಗಿಬಿಡುತ್ತದೆ. ಆ ಅಪರಿಚಿತನ ಕಾಟ ಹೆಚ್ಚುತ್ತದೆ. ಆಗ ಚೆರಿಶ್ ಮತ್ತು ಮೋಕ್ಷಾ ಆ ನಿಗೂಢ ವ್ಯಕ್ತಿಯ ಹಿಂದೆ ಬೀಳುತ್ತಾರೆ. ಈ ಮಧ್ಯೆಯೇ ಚೆರಿಶ್-ಸಾತ್ವಿಕಾ ಮತ್ತು ಸೌಪರ್ಣಿಕಾ-ದೇವ್ ಜೋಡಿಯ ಮಧ್ಯೆ ಮನಸ್ತಾಪ ಉಂಟಾಗುತ್ತದೆ. ಹಾಯಾಗಿ ಕಾಲ ಕಳೆಯುತ್ತಾ ಸಂಬಂಧ ಗಟ್ಟಿ ಮಾಡಿಕೊಳ್ಳಲು ಬಂದ ಆ ಜೋಡಿಗಳ ಬದುಕಿನಲ್ಲಿ ಬಿರುಗಾಳಿ ಬೀಸಲು ಕಾರಣವೇನು? ಕಾಟ ಕೊಡುತ್ತಿರುವ ಆ ನಿಗೂಢ ವ್ಯಕ್ತಿ ಯಾರು? ಈ ಮಧ್ಯೆ ತ್ರಿಕೋನ ಪ್ರೇಮಕಥೆಯ ಹೂರಣವೇನು? ತಿಳಿಯಲು ನೀವು ‘ಮೋಡ ಕವಿದ ವಾತಾವರಣ’ ಸಿನಿಮಾ ನೋಡಬೇಕಷ್ಟೇ.
ಸುನಿ ಇಲ್ಲಿ ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ಯ ಜತೆಗೆ ಸೈಕಲಾಜಿಕಲ್ ಅಂಶಗಳನ್ನು ಸೇರಿಸಿದ್ದು, ಸರಳ ತ್ರಿಕೋನ ಪ್ರೇಮಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ವಿಷಯಗಳ ಮೂಲಕ ‘ಚಮಕ್’ ಕೊಡುತ್ತಾರೆ. ಸ್ಪ್ಲಿಟ್ ಪರ್ಸನಾಲಿಟಿದಿಂದಾಗಿ (ಭಿನ್ನ ವ್ಯಕ್ತಿತ್ವ) ದ್ವಿತೀಯಾರ್ಧದಲ್ಲಿ ಇಡೀ ಕಥೆಯೇ ಬದಲಾಗಿ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಂತ, ಕೊರತೆಗಳು ಇಲ್ಲವೆಂತಲ್ಲ, ಕೆಲ ದೃಶ್ಯಗಳು ಪುನಾರವರ್ತಿತಗೊಂಡಾಗ ಗೊಂದಲ ಅನಿಸುವುದು ಸಹಜ. ಅದು ಹೊರತುಪಡಿಸಿದರೆ ಸಾದಾ ಸೀದಾ ನಗಿಸುತ್ತಲೇ ಸುನಿ ಪ್ರೇಕ್ಷಕರನ್ನು ಸೀಟಂಚಿನಲ್ಲಿ ಕೂರಿಸುತ್ತಾರೆ. ಶೀಲಂ ಸ್ವಾಮಿ ಚೆನ್ನಾಗಿ ಅಭಿನಯಿಸಿದ್ದು, ಡೈಲಾಗ್ ಹೇಳುವಾಗ ಸುನಿ ಮಾತನಾಡಿದಂತೆಯೇ ಭಾಸವಾಗುತ್ತದೆ. ಮೋಕ್ಷಾ ಮತ್ತು ಸಾತ್ವಿಕಾ ಚಿತ್ರಕ್ಕೆ ಗ್ಲಾಮರ್ ಜತೆಗೆ ಉತ್ತಮ ಅಭಿನಯದ ಮೂಲಕ ಗ್ರಾಮರ್ ಕೂಡ ಸೇರಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ‘ಮೋಡ ಕವಿದ ವಾತಾವರಣ’ದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.