ನ್ಯೂಸ್

ಎಲ್​ಎಸಿ ಬಳಿ ಉದ್ವಿಗ್ನತೆ, ದೇಶದ ಚಿಲ್ಲರೆ ಮಾರಾಟಗಾರರ ಸಂಕಟ

ನವದೆಹಲಿ: ವಾಸ್ತವ ಗಡಿರೇಖೆಯಲ್ಲಿ (ಎಲ್​ಎಸಿ) ಚೀನಾ ತನ್ನ ಬೃಹತ್​ ಸೇನೆ ಜಮಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಒಪ್ಪಿಕೊಂಡಿರುವಂತೆ ಸೇನೆಯನ್ನು ಹಿಂಪಡೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತ ಚೀನಾಕ್ಕೆ ಎಚ್ಚರಿಕೆ ನೀಡಿದ ನಂತರದಲ್ಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದರ ಪರಿಣಾಮ ದೇಶದ ಚಿಲ್ಲರೆ ಮಾರಾಟ ವಲಯದ ಮೇಲಾಗುತ್ತಿದೆ!

ಇಮಾಂ ಸಾಬಿಗೂ ಗೋಕುಲಾಷ್ಠಮಿಗೂ ಏನು ಸಂಬಂಧ ಎಂಬಂತೆ, ಚೀನಾದೊಂದಿಗಿನ ಬಿಕ್ಕಟ್ಟಿಗೂ ದೇಶದ ಚಿಲ್ಲರೆ ಮಾರಾಟ ವಲಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಬೇಡಿ. ಸಂಬಂಧ ಇದೆ. ಹೇಗೆ?

ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ಭಾರತ ಮತ್ತು ಚೀನಾ ನಡುವಿನ ರಕ್ತಸಿಕ್ತ ಘರ್ಷಣೆಯ ಬಳಿಕ ಭಾರತದಲ್ಲಿ ಚೀನಾ ವಿರೋಧ ಮನೋಭಾವ ಹೆಚ್ಚಾಗಿದೆ. ಚೀನಾದಿಂದ ಬರುವ ಉತ್ಪನ್ನಗಳು, ಮೊಬೈಲ್​ ಆ್ಯಪ್​ಗಳೆಲ್ಲವನ್ನೂ ತಿರಸ್ಕರಿಸುವಂತೆ ಜನರು ಅಭಿಯಾನಗಳನ್ನು ಕೈಗೊಳ್ಳುತ್ತಿದ್ದಾರೆ. ಜನರ ಈ ಮನೋಭಾವ ಭಾರತದಲ್ಲಿ ಚೀನಿ ಉತ್ಪನ್ನಗಳನ್ನು ಮಾರಾಟ ಮಾಡುವ ಚಿಲ್ಲರೆ ಮಾರಾಟಗಾರರ ಮೇಲೂ ಪರಿಣಾಮ ಬೀರಲಾರಂಭಿಸಿದೆ.

ಮೊದಲೇ ಕೋವಿಡ್​-19 ಲಾಕ್​ಡೌನ್​ನಿಂದ ಮಾರಾಟವಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಚಿಲ್ಲರೆ ಮಾರಾಟಗಾರರು, ಚೀನಿ ವಿರೋಧಿ ಮನೋಭಾವದಿಂದ ಆ ನಷ್ಟ ಮತ್ತಷ್ಟು ಹೆಚ್ಚಾಗುವುದು ಬೇಡ ಎಂದು ದೇವರಲ್ಲಿ ಮೊರೆ ಇಡಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಿ ಉತ್ಪನ್ನಗಳ ಮೇಲಿನ ಲೇಬಲ್​ ಅನ್ನು ಸ್ಟಿಕ್ಕರ್​ ಬಳಸಿ ಮುಚ್ಚಿ, ಭಾರತೀಯ ಉತ್ಪನ್ನ ಎಂಬಂತೆ ಬಿಂಬಿಸಿ ಮಾರಾಟ ಮಾಡಲು ಆರಂಭಿಸಿದ್ದಾರೆ.

ವಿಶೇಷವಾಗಿ ಮೊಬೈಲ್​ ಚಿಲ್ಲರೆ ಮಾರಾಟ ವಲಯದಲ್ಲಿ ಇದು ಹೆಚ್ಚಾಗಿದೆ. ಅಖಿಲ ಭಾರತ ಮೊಬೈಲ್​ ಚಿಲ್ಲರೆ ಮಾರಾಟಗಾರರ ಸಂಘ (ಎಐಎಂಆರ್​ಎ) ಈ ವಿಷಯವನ್ನು ಖಚಿತಪಡಿಸಿದೆ.

ಉತ್ಪನ್ನಗಳಷ್ಟೇ ಅಲ್ಲ, ಚೀನಾದ ಮೊಬೈಲ್​ಗಳನ್ನು ಮಾರಾಟ ಮಾಡುವ ಅಂಗಡಿಗಳ ನಾಮಫಲಕಗಳನ್ನು ಬಟ್ಟೆಗಳಿಂದ ಮುಚ್ಚಿ ಇಲ್ಲವೇ ಅವುಗಳ ಬದಲಿಗೆ ಹೊಸ ನಾಮಫಲಕಗಳನ್ನು ಅಳವಡಿಸುವ ಮೂಲಕ ಮೊಬೈಲ್​ ಮಾರಾಟ ವ್ಯವಹಾರವನ್ನು ಮುಂದುವರಿಸಲು ಸಂಘದ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಒಪ್ಪೋ, ವಿವೋ ಮತ್ತು ಕ್ಸಒಮಿ ಸೇರಿ ಚೀನಾದ ಎಲ್ಲ ಮೊಬೈಲ್​ ಬ್ರ್ಯಾಂಡ್​ಗಳ ಸಂಸ್ಥೆಗಳಿಗೆ ಪತ್ರ ಬರೆದಿರುವುದಾಗಿ ಎಐಎಂಆರ್​ಎ ತಿಳಿಸಿದೆ.

ಒಪ್ಪೋ ಮತ್ತು ವಿವೋ ಕಂಪನಿಗಳು ಇದಕ್ಕೆ ಸ್ಪಂದಿಸಿದ್ದರೆ, ಕ್ಸಒಮಿ ಕಂಪನಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದೆ.