ಬೆಂಗಳೂರು: 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪುತ್ರಿಗೆ ಶಾಲೆಯ ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲ ವಾಗಲೆಂದು ಮೊಬೈಲ್ ಕೊಡಿಸಿದ್ದ ಪಾಲಕರು ಈಗ ಪೇಚಿಗೆ ಸಿಲುಕಿದ್ದಾರೆ.
ಫೇಸ್ಬುಕ್ನಲ್ಲಿ ಖಾತೆ ತೆರೆದಿದ್ದ ಬಾಲಕಿಯನ್ನು ಪರಿಚಯಿಸಿಕೊಂಡ ಯುವಕನೊಬ್ಬ ಪ್ರೀತಿಸುವ ಸೋಗಿನಲ್ಲಿ ಹಂತಹಂತವಾಗಿ 500 ಗ್ರಾಂ ಚಿನ್ನಾಭರಣ, 57 ಸಾವಿರ ರೂ. ಪಡೆದುಕೊಂಡಿದ್ದಲ್ಲದೇ ಅತ್ಯಾಚಾರ ಎಸಗಿ ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯ ಪಾಲಕರು ಕೊಟ್ಟ ದೂರಿನ ಅನ್ವಯ ಅಭಿಷೇಕ್ ಗೌಡ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?: ರಾಜಾಜಿನಗರ ನಿವಾಸಿ ದಂಪತಿಯ ಪುತ್ರಿ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲವಾಗಲೆಂದು ಆಕೆಗೆ ಸ್ಮಾರ್ಟ್ ಫೋನ್ ಕೊಡಿಸಿದ್ದರು. ಆಕೆ ಫೇಸ್ಬುಕ್ನಲ್ಲಿ ಖಾತೆ ತೆರೆದಿದ್ದು, ಈ ವೇಳೆ ಅಭಿಷೇಕ್ಗೌಡ ಎಂಬಾತ ಸ್ನೇಹ ಬೆಳೆಸಿದ್ದ. ಬಳಿಕ ಫೋನ್ ನಂಬರ್ ಪಡೆದು ಕರೆ ಮಾಡಿ ಪ್ರೀತಿಸುವುದಾಗಿ ನಂಬಿಸಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಬಳಿಕ ಪುಸಲಾಯಿಸಿ ಹಂತಹಂತವಾಗಿ 500 ಗ್ರಾಂ ಚಿನ್ನಾಭರಣ, 57 ಸಾವಿರ ರೂ. ಪಡೆದಿದ್ದಾನೆ.
ಚಿನ್ನದಸರ ಕೇಳಿದಾಗ ಕೃತ್ಯ ಬೆಳಕಿಗೆ: ಪುತ್ರಿಯ ಕೊರಳಿನಲ್ಲಿದ್ದ 10 ಗ್ರಾಂನ ಚಿನ್ನದ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಸ್ನೇಹಿತನಿಗೆ ಕೊಟ್ಟಿದ್ದೇನೆ. ವಾಪಸ್ ಪಡೆಯು ವುದಾಗಿ ಪಾಲಕರ ಮುಂದೆ ಹೇಳಿದ್ದಾಳೆ. ಏ.5ರಂದು ಮನೆಯ ಲಾಕರ್ನಲ್ಲಿಟ್ಟಿದ್ದ 500 ಗ್ರಾಂ ಒಡವೆ ಹಾಗೂ 57 ಸಾವಿರ ರೂ. ನಗದು ಇಲ್ಲದಿರುವುದು ಗೊತ್ತಾಗಿದೆ. ಈ ಕುರಿತು ಮತ್ತೇ ವಿಚಾರಿಸಿದಾಗ, ಅಭಿಷೇಕ್ ಗೌಡ ಒತ್ತಾಯಿಸುತ್ತಿದ್ದ. ನವೆಂಬರ್ನಲ್ಲಿ ಪಾರ್ಕ್ಗೆ ಕರೆದು ಒಡವೆಗಳನ್ನು ತಂದುಕೊಂಡುವಂತೆ ಪೀಡಿಸಿದ್ದ. ಹೀಗಾಗಿ ಆತ ಕೇಳಿದಾಗಲೆಲ್ಲ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನೆ. ಇದಾದ ಬಳಿಕ ಚಿನ್ನಾಭರಣ ವಾಪಸ್ ಕೊಡುವುದಾಗಿ ನಂಬಿಸಿದ್ದ ಅಭಿಷೇಕ್, ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ಎಸಗಿ ದ್ದಾನೆ. ಅಲ್ಲದೆ, ಒಮ್ಮೆ ಮನೆಗೆ ಬಂದಿದ್ದಾಗ ಚಿನ್ನಾಭರಣ ಮತ್ತು ಹಣ ಕಿತ್ತುಕೊಂಡು ಹೋಗಿರುವ ವಿಚಾರವನ್ನು ಪಾಲಕರ ಮುಂದೆ ಬಿಚ್ಚಿಟ್ಟಾಗ ಬಯಲಾಗಿದೆ.
ಖಾಸಗಿ ಫೋಟೋ ತೋರಿಸಿ ಬೆದರಿಕೆ: ಚಿನ್ನಾಭರಣ ಹಾಗೂ ನಗದು ವಾಪಸ್ ಕೊಡುವಂತೆ ಅಭಿಷೇಕ್ನನ್ನು ಕೇಳಿದ್ದಾಳೆ. ಆಗ ಅಭಿಷೇಕ್ಗೌಡ, ಈ ವಿಚಾರವನ್ನು ತಂದೆ-ತಾಯಿ ಮುಂದೆ ಬಾಯ್ಬಿಟ್ಟರೆ, ನನ್ನ ಬಳಿಯಿರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಫೇಸ್ಬುಕ್ನಲ್ಲಿ ಹರಿಯಬಿಟ್ಟು ಮಾನ ಕಳೆಯುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ತಂದೆ-ತಾಯಿಯನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದು ಗೊತ್ತಾಗಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.