ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಮೊಬೈಲ್ ಬಳಕೆ ಇನ್ನೂ ಸಂಪೂರ್ಣ ಸ್ತಬ್ಧವಾಗಿಲ್ಲ. ಇತ್ತೀಚೆಗೆ ಜೈಲಾಧಿಕಾರಿಗಳು ತಪಾಸಣೆ ನಡೆಸಿದಾಗ ಸಿಮ್ ಸಮೇತ ಮೊಬೈಲ್ ಪತ್ತೆಯಾಗಿದೆ.
ಈ ಕುರಿತು ಜೈಲು ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ, ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ವಿಚಾರಣಾಧೀನ ಕೈದಿ ನವೀಣ್ ನಾಗರಾಜ ಅಲಿಯಾಸ್ ನವೀನ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಭಾನುವಾರ (ಅ.6) ಗುಪ್ತಮಾಹಿತಿ ಮೇರೆಗೆ ತಡರಾತ್ರಿ 12.10ರಿಂದ 12.45ರ ನಡುವೆ ಕಾರಾಗೃಹ ಅಧಿಕಾರಿ, ಸಿಬ್ಬಂದಿ ತಂಡ ವಿಚಾರಣಾಧೀನ ಬಂದಿಗಳ ವಿಭಾಗದ ಏಳನೇ ಬ್ಯಾರಕ್ 7ನೇ ಕೊಠಡಿ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿತ್ತು. ಆಗ ಶೌಚಗೃಹದಲ್ಲಿ ಅಡಗಿಸಿಟ್ಟಿದ್ದ ಸಿಮ್ ಸಮೇತ ಮೊಬೈಲ್ ಪತ್ತೆಯಾಗಿದ್ದು, ನವೀನ್‌ಗೆ ಸೇರಿದ್ದು ಎಂಬುದು ಗೊತ್ತಾಗಿದೆ.
ನಿಷೇಧ ಇದ್ದರೂ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿಯ ವಿರುದ್ಧ ಶಿಸು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಕರ್ಣ ಬಿ. ಕ್ಷತ್ರಿ ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.