ನ್ಯೂಸ್

ರಾಜ್ಯದ ಪ್ರಮುಖ ದೇವಾಲಯಯಗಳ ಸೇವೆ ಬುಕ್ಕಿಂಗ್‌ಗೆ ಮೊಬೈಲ್ ಆ್ಯಪ್ !

ಬೆಂಗಳೂರು: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ, ಕೊಠಡಿ ಕಾದಿರಿಸಲು ಪ್ರತ್ಯೇಕವಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಬೇಕೆಂಬ ಭಕ್ತರ ಕೋರಿಕೆ, ಬದಲಾದ ತಂತ್ರಜ್ಞಾನ ಯುಗದ ನಿರೀಕ್ಷೆಗೆ ಸರ್ಕಾರ ಸ್ಪಂದಿಸಿ, ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.

ಸಾರಿಗೆ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಧಾರ್ಮಿಕ ದತ್ತಿ ಇಲಾಖೆ ಹಿರಿಯ ಅಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ಸಭೆ ಅಧ್ಯಕ್ಷತೆವಹಿಸಿದ್ದ ಸಚಿವ ರಾಮಲಿಂಗರೆಡ್ಡಿ ಮಾತನಾಡಿ ಪ್ರಮುಖ ದೇವಾಲಯಗಳ ಸೇವೆ, ಕೊಠಡಿಗಳ ಬುಕ್ಕಿಂಗ್‌ಗೆ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲು ನಿರ್ದೇಶಿಸಿದರು.

ಪ್ರಮುಖ ದೇವಾಲಯಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಗೃಹ ಮುಂತಾದ ಮೂಲಸವಲತ್ತು ಒದಗಿಸುವ ಕಾರ್ಯವನ್ನು ಎರಡು ತಿಂಗಳೊಳಗೆ ಕೈಗೆತ್ತಿಕೊಳ್ಳಲು ತಾಕೀತು ಮಾಡಿದರು.

ಇತರ ನಿರ್ಧಾರಗಳು

ಶಕ್ತಿ ಯೋಜನೆಯಿಂದಾಗಿ ದೇವಾಲಯಗಳಿಗೆ ಬರುವ ಭಕ್ತ ಸಂಖ್ಯೆ ಏರಿಕೆಯಾಗಿದೆ. ದರ್ಶನಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಈ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ನೀಡಬೇಕು ಎಂದು ಹೇಳಿದರು.

ಪ್ರಮುಖ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ, ಎಲ್ಲ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ನೇರ, ಸುಗಮವಾಗಿ ದೇವರ ದರ್ಶನದ ವ್ಯವಸ್ಥೆ ಮಾಡಬೇಕು.
ಎಲ್ಲ ದೇವಾಲಯಗಳಲ್ಲಿ ಹುಂಡಿಗಳನ್ನು ಅಳವಡಿಸುವುದು ಕಡ್ಡಾಯ. ಈ ಹುಂಡಿಗಳನ್ನು ಭಕ್ತರಿಗೆ ಕಾಣುವ ಸ್ಥಳದಲ್ಲಿ ಸ್ಥಾಪಿಸಿ, ಸೂಚನಾ ಫಲಕಗಳನ್ನು ಹಾಕಬೇಕು ಎಂದು ರಾಮಲಿಂಗರೆಡ್ಡಿ ಸೂಚಿಸಿದರು.

  • ದೇವಾಲಯಕ್ಕೆ ಶಿಶುವಿನೊಂದಿಗೆ ಬರುವ ತಾಯಂದಿರಿಗೆ ಶಿಶು ಆರೈಕೆ, ಹಾಲು ಉಣಿಸಲು ಅನುಕೂಲವಾಗುವಂತೆ ಕೊಠಡಿ ವ್ಯವಸ್ಥೆ
  • ಪ್ರಮುಖ 25 ದೇವಸ್ಥಾನಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವುದಕ್ಕಾಗಿ ಮಾಸ್ಟರ್‌ಪ್ಲ್ಯಾನ್ ತಯಾರಿ
  • ದೇವಾಲಯಗಳ ಹೊಂದಿರುವ ಚರ-ಸ್ಥಿರಾಸ್ತಿಗಳ ಸಮೀಕ್ಷೆ, ಒತ್ತುವರಿ ತೆರವುಗೊಳಿಸಿ ದಾಖಲೀಕರಿಸುವುದು ಕಡ್ಡಾಯ
  • ಚಾರ್‌ಧಾಮ್-ಕಾಶಿ- ಮಾನಸ ಸರೋವರ ಯಾತ್ರೆ- ಕರ್ನಾಟಕ ಭಾರತ ಗೌರವ್ ಕಾಶಿ ಯಾತ್ರೆಗೆ ಸಹಾಯಧನ ವಿತರಣೆ ಸರಳೀಕರಣ, ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
  • ದೇವಾಲಯಗಳ 100 ಮೀಟರ್ ಸುತ್ತಳತೆಯಲ್ಲಿ ಮದ್ಯ, ಸಿಗರೇಟ್, ಗುಟ್ಕಾ ಇತರ ಮಾದಕ ವಸ್ತುಗಳ ಮಾರಾಟ ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಲು ಸೂಚನೆ
  • ಅರ್ಚಕರಿಗೆ ಪಾವತಿಸುವ ತಸ್ಥೀಕ್/ ವರ್ಷಾಸನವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆಗೆ ಕ್ರಮ
  • ಎಲ್ಲ ದೇವಾಲಯಗಳಲ್ಲಿ ಭಕ್ತರು ಮೊಬೈಲ್ ಬಳಸುವುದನ್ನು ನಿಷೇಧಿಸಿ ಆದೇಶಿಸಿದ್ದು, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ