ನ್ಯೂಸ್

ಕರೊನಾ ಹಿನ್ನೆಲೆಯಲ್ಲಿ ಚೀನಾದಿಂದ ಕಾಲ್ತೆಗೆಯುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಗಾಳ

ಕರೊನಾ ಹಿನ್ನೆಲೆಯಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಕಾಲ್ತೆಗೆಯುತ್ತಿವೆ. ಇಂಥ ಕಂಪನಿಗಳನ್ನು ಗುರುತಿಸಿ ಅವುಗಳ ಹೂಡಿಕೆ ಭಾರತಕ್ಕೆ ಬರುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಚೀನಾ ತೊರೆಯುತ್ತಿರುವ ಕಂಪನಿಗಳಿಗೆ ದಕ್ಷಿಣ ಏಷ್ಯಾದಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲ, ಸುಧಾರಿತ ಮೂಲಸೌರ್ಕರ್ಯ ವಿಪುಲವಾಗಿ ದೊರೆಯುವ ಪರ್ಯಾಯ ಸ್ಥಳ ಭಾರತ. ಹೀಗಾಗಿ ಇಂಥ ಕಂಪನಿಗಳನ್ನು ಸೆಳೆಯಲು ರಾಜ್ಯ ಸರ್ಕಾರಗಳು ಸಿದ್ಧವಾಗಬೇಕು ಎಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರೊನಾ ಕಾರಣ ಸೊರಗಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಕಂಪನಿಗಳು ಚೀನಾದಿಂದ ವಿಮುಖವಾಗುತ್ತಿರುವ ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೂಡಿಕೆಯ ಸಾಧ್ಯತೆಗೆ ಸಮಗ್ರ ಯೋಜನೆಯನ್ನು ತಯಾರು ಮಾಡಿ ಇರಿಸಿಕೊಂಡಿರುವುದು ಒಳ್ಳೆಯದು ಎಂದು ಮೋದಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳಪೆ ಕಿಟ್ ಆರೋಪ ಅಲ್ಲಗಳೆದ ಚೀನಾ

ಚೆನ್ನೈ: ಕರೊನಾ ಪರೀಕ್ಷೆಗೆ ಬಳಸುವ ರ್ಯಾಪಿಡ್ ಆಂಟಿಬಾಡಿ ಟೆಸ್ಟ್ ಕಿಟ್​ಗಳು ದೋಷಪೂರಿತವಾಗಿವೆಯೆಂಬ ಭಾರತದ ಆರೋಪವನ್ನು ವಂಡ್​ಫೋ ಬಯೋಟೆಕ್ ಕಂಪನಿ ತಳ್ಳಿ ಹಾಕಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್), ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯ (ಎನ್​ಐವಿ) ಮೂಲಕ ಕಿಟ್​ಗಳ ಮೌಲ್ಯಮಾಪನ ಮಾಡಿ ಅಂಗೀಕರಿಸಿತ್ತು ಎಂದು ವಂಡ್​ಫೋ ಪ್ರತಿಪಾದಿಸಿದೆ.

ಪರೀಕ್ಷಾ ಫಲಿತಾಂಶಗಳಲ್ಲಿ ವ್ಯತ್ಯಯವಾಗಲು ಪರೀಕ್ಷೆ ನಡೆಸಿದ ಸಮಯ (ಟೈಮಿಂಗ್) ಕಾರಣವಿರಬಹುದು. ಕಿಟ್​ನ ನಿಖರತೆ ನಿರ್ಧರಿಸುವಲ್ಲಿ ಪರೀಕ್ಷೆಯ ಸಮಯ ಮಹತ್ವದ್ದು. ತನ್ನ ಉತ್ಪನ್ನಗಳಿಗೆ ಎನ್​ಐವಿಯ ಅಂಗೀಕಾರವಿದೆ ಎಂದು ಕಂಪನಿ ಹೇಳಿದೆ.

ಭಾರತ ಸರ್ಕಾರದ ನಿರ್ಧಾರದಿಂದ ಆಶ್ಚರ್ಯವೂ ನಿರಾಸೆಯೂ ಆಗಿದೆ ಎಂದು ಕಂಪನಿ ಹೇಳಿದೆ. ಕರೊನಾ ವೈರಸ್ ವ್ಯಾಪಿಸುವುದರ ಮೇಲೆ ಕಣ್ಗಾವಲಿಡುವ ಸಾಧನವಾಗಿ ರ್ಯಾಪಿಡ್ ಟೆಸ್ಟ್ ಕಿಟ್ ಬಳಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಆರಂಭಿಕ ಹಂತದಲ್ಲಿ ಉತ್ತಮ ನಿರ್ವಹಣೆ ತೋರಿದ್ದರೂ ನಂತರ ಫಲಿತಾಂಶದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಅದರ ಬಳಕೆ ನಿಲ್ಲಿಸಲು ನಿರ್ಧರಿಸಿತ್ತು. ವಂಡ್​ಫೋ ಸಾರ್ಸ್ ಸಿಓವಿ-2 ಆಂಟಿಬಾಡಿ ಪರೀಕ್ಷೆ (ಲ್ಯಾಟರಲ್ ಫೋ› ವಿಧಾನ), ಭಾರತದಿಂದ ಆಮದು ಲೈಸೆನ್ಸ್ ಪಡೆದ ಮೊದಲ ಕಿಟ್​ಗಳಲ್ಲಿ ಒಂದಾಗಿತ್ತು. ಒಂದು ಸಂಸ್ಥೆಯಾಗಿ, ಗುಣಮಟ್ಟಕ್ಕೆ ನಾವು ಬಹಳ ಆದ್ಯತೆ ನೀಡುತ್ತೇವೆ. ಚೀನಾದಲ್ಲಿ ಒಪ್ಪಿತವಾದ ನಮ್ಮ ಉತ್ಪನ್ನಗಳ ಗುಣಮಟ್ಟವನ್ನು ರಫ್ತು ಮಾಡುವ ದೇಶಗಳಲ್ಲಿ ಕೂಡ ಕಾಯ್ದುಕೊಳ್ಳುತ್ತೇವೆ ಎಂದು ಕಂಪನಿ ಹೇಳಿದೆ.

ಏನಿದು ಟೈಮಿಂಗ್?

ನಿಖರತೆ ನಿರ್ಧರಿಸುವಲ್ಲಿ ಪರೀಕ್ಷೆ ನಡೆಸುವ ಸಮಯ (ಟೈಮಿಂಗ್) ಮಹತ್ವದ ಪಾತ್ರ ನಿರ್ವಹಿಸುತ್ತದೆನ್ನುವುದು ವಂಡ್​ಫೋ ಪ್ರತಿಪಾದನೆ. ವೈರಲ್ ಸೋಂಕಿನ ಅವಧಿಯಲ್ಲಿ ಸೂಕ್ತ ಹಾಗೂ ಸಂಬಂಧಿತ ಪರೀಕ್ಷೆ ವಿಧಾನ ವಿಭಿನ್ನವಾಗಿರುತ್ತವೆ. ವೈರಸ್, ಪ್ರತಿಜನಕ (ಆಂಟಿಜನ್ಸ್) ಮತ್ತು ಮಾನವ ದೇಹದಲ್ಲಿರುವ ಎರಡು ಬಗೆಯ (ಐಜಿಜಿ/ಐಜಿಎಂ) ಪ್ರತಿಕಾಯಗಳನ್ನು ಸೂಚಿಸುವ ರೈಬೋನ್ಯೂಕ್ಲಿಯಿಕ್ ಆಸಿಡ್ (ಆರ್​ಎನ್​ಎ) ಕಂಡುಬರುವ ಸಮಯದ ಆಧಾರದಲ್ಲಿ ವಿವಿಧ ಬಗೆಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಫಲಿತಾಂಶದ ನಿಖರತೆಗಾಗಿ ಹೀಗೆ ಮಾಡಲಾಗುತ್ತದೆ ಎನ್ನುವುದು ಅದರ ವಿವರಣೆಯಾಗಿದೆ.