ನ್ಯೂಸ್

ಈ ಒಂದು ಚಿತ್ರಕ್ಕೆ 10 ಸಾಂಗ್​ ಕಂಪೋಸ್​ ಮಾಡಿದ ಆಸ್ಕರ್​ ವಿಜೇತ ಎಂ.ಎಂ. ಕೀರವಾಣಿ!

ಮುಂಬೈ: ಎಸ್​.ಎಸ್​. ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಪಡೆದುಕೊಂಡ ಖ್ಯಾತ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಇದೀಗ 'ಚಂದ್ರಮುಖಿ 2' ಸಿನಿಮಾಗೆ ಬರೋಬ್ಬರಿ 10 ಸಾಂಗ್​ ಅನ್ನು ಕಂಪೋಸ್​ ಮಾಡಿದ್ದಾರೆ.

'ಚಂದ್ರಮುಖಿ 1' ಚಿತ್ರದ ಮುಂದುವರಿದ ಭಾಗವಾಗಿರುವ 'ಚಂದ್ರಮುಖಿ 2' ಚಿತ್ರ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ನಟ ರಾಘವ ಲಾರೆನ್ಸ್ ಮತ್ತು ಬಾಲಿವುಡ್​ನ ನಟಿ ಕಂಗನಾ ರಣಾವತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಆಪ್ತಮಿತ್ರ' ಖ್ಯಾತಿಯ ಪಿ. ವಾಸು ನಿರ್ದೇಶನದ ಚಿತ್ರಕ್ಕೆ ಎಂ.ಎಂ. ಕೀರವಾಣಿ ಅವರು 10 ಹಾಡನ್ನು ಸಂಯೋಜಿಸಿದ್ದಾರೆ.

ಚಿತ್ರದ ಮೊದಲ ಹಾಡು 'ಸ್ವಾಗತಾಂಜಲಿ' ಇತ್ತೀಚೆಗಷ್ಟೇ ಅನಾವರಣಗೊಂಡಿತು. ಈ ಬಗ್ಗೆ ಮಾಹಿತಿ ಹಂಚಿಕೊಂಡ ಎಂ.ಎಂ. ಕೀರವಾಣಿ ಅವರು ಚಿತ್ರದಲ್ಲಿ ಇನ್ನೂ 9 ಹಾಡುಗಳಿವೆ. ಈ ಮೂಲಕ ಸಿನಿಮಾದಲ್ಲಿ ನನ್ನ ಕೆಲಸ ಮುಕ್ತಾಯಗೊಳ್ಳುತ್ತಿದೆ ಎಂದು ಹೇಳಿದರು. ಚಿತ್ರದ ಭಾಗವಾಗಿದ್ದಕ್ಕೆ ಚಂದ್ರಮುಖಿ 2 ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಸದ್ಯ ಉಳಿದ ಹಾಡುಗಳ ರಿಲೀಸ್​ಗಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

ಹಾರರ್-ಕಾಮಿಡಿ ಜಾನರ್​ನಲ್ಲಿ ಮೂಡಿಬಂದಿರುವ ಚಂದ್ರಮುಖಿ 2 ಸೆಪ್ಟೆಂಬರ್ 15, 2023 ರಂದು ತೆಲುಗು ಸೇರಿದಂತೆ ಕೆಲವು ಭಾಷೆಗಳಲ್ಲಿ ಬಹುತೇಕ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಪ್ರಸ್ತುತ ಚಿತ್ರದ ಡಬ್ಬಿಂಗ್​ ಕೆಲಸಗಳು ನಡೆಯುತ್ತಿದ್ದು, ಲಕ್ಷ್ಮಿ ಮೆನನ್, ವಡಿವೇಲು, ರಾಧಿಕಾ ಶರತ್‌ಕುಮಾರ್, ಮಹಿಮ ನಂಬಿಯರ್​, ಸುಭಿಕ್ಷಾ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).