ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಮಾಜವಾದಕ್ಕೆ ತಿಲಾಂಜಲಿ ನೀಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮೈಸೂರಿನ ಮುಡಾ ಸೈಟ್ ಮಾರಾಟ ಪ್ರಕರಣದಲ್ಲಿ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ ಸಮಾಜವಾದದ ಹಿನ್ನೆಲೆಯಿಂದ ಬಂದ ನನಗೂ ಭ್ರಷ್ಟಾಚಾರಕ್ಕೂಸಾಸಿವೆ ಕಾಳಷ್ಟು ಸಂಬಂಧ ಇಲ್ಲ ಸಿದ್ದರಾಮಯ್ಯ ಎಂದು ಹೇಳುತ್ತಾ ಬಂದಿದ್ದರು. ಆದರೆ ಈಗ ಮೈಸೂರು ಮುಡಾದಲ್ಲಿ ತನ್ನ ಪತ್ನಿಗೆ 14 ಸೈಟ್ ಮಾಡಿಸಿಕೊಟ್ಟಿದ್ದಾರೆ. ಹಾಗಾದರೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹೇಗೆ ಗ್ಯಾರಂಟಿಗೆ ಬಳಸುತ್ತೀರಿ ? ಎಸ್‌ಸಿ, ಎಸ್‌ಟಿಗಳಿಗೆ, ದಲಿತರಿಗೆ ಸಿದ್ದರಾಮಯ್ಯ ಮಹಾ ದ್ರೋಹ ಎಸಗಿದ್ದಾರೆ. ಆರ್ಥಿಕ ತಜ್ಞ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ 4 ರಿಂದ 5 ಲಕ್ಷ ರೂ. ಬೆಲೆ ಬಾಳುವ ಜಮೀನನ್ನು ಮುಡಾಕ್ಕೆ ಕೊಟ್ಟು ಈಗ ವಿಪಕ್ಷಗಳಿಂದ ಆರೋಪ ವ್ಯಕ್ತವಾದಾಗ 62 ಕೋಟಿ ರೂ. ವಾಪಸ್ ಕೊಡಿ ಸೈಟ್ ಕೊಡುತ್ತೇನೆ ಎನ್ನುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಹಿಂದೆ ರೈತರು ಕಡಿಮೆ ಬೆಲೆಗೆ ಜಮೀನನ್ನು ಕೊಟ್ಟಿದ್ದಾರೆ. ಈಗ ಅದು ಕೋಟ್ಯಂತರ ಮೌಲ್ಯದ ಫ್ಲಾಟ್ ಸೈಟ್ ಆಗಿ ಪರಿವರ್ತನೆಯಾಗಿದೆ.
ಈಗ ಎಲ್ಲ ರೈತರು ಅಷ್ಟೇ ಮೊತ್ತ ಕೇಳಿದರೆ ಕೋಟಿ ರೂ.ವಾಪಸ್ ನೀಡುತ್ತೀರಾ ಎಂದು ರವಿಕುಮಾರ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಭ್ರಷ್ಟ ಮುಖ್ಯಮಂತ್ರಿಯಾಗಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಬಳಸಿದ್ದಾರೆ. 700 ಖಾತೆಗಳಿಗೆ ಹಣ ಸಂದಾಯ ಮಾಡಿ ಡ್ರಾ ಮಾಡಲಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ನೈತಿಕ ಹೊಣೆಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಕೂಡಾ ಮುಡಾ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಬೇಕು ಎಂದು ರವಿ ಕುಮಾರ್ ಆಗ್ರಹಿಸಿದರು.