ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 11 ಸ್ಥಾನಗಳ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿವೆ.
ವಿಧಾನಸಭೆ ಸಂಖ್ಯಾ ಬಲದ ಮೇಲೆ ಕಾಂಗ್ರೆಸ್ 7, ಬಿಜೆಪಿ 3 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲಿವೆ. ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ್ದರಿಂದ ಭಾನುವಾರ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದವು.
ಜೆಡಿಎಸ್ ಸೋಮವಾರ ಬೆಳಗ್ಗೆ ಜೆಡಿಎಸ್ ಶಾಸಕಾಂಗ ಮತ್ತು ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಈವರೆಗೆ ಯಶವಂಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಸೋಲು ಕಂಡ ಜವರಾಯಿಗೌಡ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಭಾನುವಾರದ ಬೆಳವಣಿಗೆ ಗಮನಿಸಿದರೆ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರು ಹೆಸರು ಹಠಾತ್ ಮುನ್ನೆಲೆಗೆ ಬಂದಿದೆ.
ಈ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಜವರಾಯಿಗೌಡ, ಕುಪೇಂದ್ರ ರೆಡ್ಡಿ, ಬಿ.ಎಂ.ಾರೂಕ್ ಮತ್ತು ರಮೇಶ್ ಗೌಡ ಅವರು ಹೆಸರು ಹರಿದಾಡುತ್ತಿದ್ದವು. ಜವರಾಯಿಗೌಡ ಬಹುತೇಕ ಫಿಕ್ಸ್ ಎಂಬ ವಾತಾವರಣ ಜೆಡಿಎಸ್ ನಲ್ಲಿ ಸೃಷ್ಟಿಯಾಗಿತ್ತು. ಆದರೆ ಹೊಸ ರಾಜಕೀಯ ಬೆಳವಣಿಗೆಯಲ್ಲಿ ಈಗ ಕುಪೇಂದ್ರ ರೆಡ್ಡಿ ಹೆಸರು ಮುನ್ನೆಲೆಗೆ ಬಂದಿದೆ. ಸೋಮವಾರ ನಡೆಯುವ ಶಾಸಕಾಂಗ ಸಭೆಯಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುತ್ತದೆ.
ಅಲ್ಲದೆ, ಸೋಮವಾರವೇ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ ಪಕ್ಷದ ನೇತಾರರ ನೇತೃತ್ವದಲ್ಲಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.