ಸಾಮಾನ್ಯ ಸಭೆ, ಸಿಬ್ಬಂದಿ ಕೊರತೆ, ಸರ್ಕಾರ, ವರದಿ, General Assembly, Staff Shortage, Government, Report,  
ನ್ಯೂಸ್

ವಸತಿ ನಿಲಯ ಪರಿವರ್ತನೆಗೆ ಶಾಸಕರ ಸೂಚನೆ

ಶಿವಕುಮಾರ ಎಸ್.ಪಿ.

ಕಾರ್ಗಲ್: ಪಟ್ಟಣದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಸಂಖ್ಯೆಯಲ್ಲಿ ಇಳಿಮುಖವಾದ ಕಾರಣ ಇದನ್ನು ಬಾಲಕರ ವಸತಿ ನಿಲಯವಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಗೋಪಾಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಇಲ್ಲದ ಕಾರಣ ವಸತಿ ನಿಲಯವನ್ನು ಮುಚ್ಚಲಾಗಿದೆ. ಮುಂದಿನ ವರ್ಷಕ್ಕೆ ಇದನ್ನು ಮುಚ್ಚುವ ಬದಲಿಗೆ ಬಾಲಕರ ವಸತಿ ನಿಲಯವಾಗಿ ಪರಿವರ್ತಿಸಿ ಸ್ಥಳೀಯವಾಗಿರುವ ಐಟಿಐ ತಾಂತ್ರಿಕ ಕಾಲೇಜು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ವಿದ್ಯಾರ್ಥಿಗಳ ವಸತಿ ನಿಲಯವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಗಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರತೆ, ಪ್ರಯೋಗ ಶಾಲೆ ತಂತ್ರಜ್ಞರು, ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ, ಸಿಬ್ಬಂದಿ ವಸತಿಗೃಹ, ಪ್ರಾಥಮಿಕ ಆರೋಗ್ಯ ಕೇಂದ್ರದ ವಾಹನ ರಿಪೇರಿ ಸೇರಿ ಹಲವು ಸಮಸ್ಯೆಗಳನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತುಷಾರ್ ಸಭೆಗೆ ತಿಳಿಸಿದರು. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ವಿಚಾರವಾಗಿ ಚರ್ಚಿಸಿ, ತಾಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು.

ಬೀದಿ ದೀಪ ನಿರ್ವಹಣೆ ಮಾಡಿ: ಜೋಗ ಎಸ್‌ವಿಪಿ ಕಾಲನಿ, ಎಂಜಿಎಚ್‌ಇ ಕಾಲನಿ, ಟಿ.ಎಂ.ಶೆಡ್, ರೆಡ್ಡಿ ಬ್ಲಾಕ್ ಸೇರಿ ಜೋಗ ಮತ್ತು ಕಾರ್ಗಲ್ ಒಳಗೊಂಡ ಕೆಪಿಸಿ ಕಾಲನಿ ಪ್ರದೇಶಗಳಲ್ಲಿ ನಿಗಮದ ಉದ್ಯೋಗಿಗಳು ವಾಸವಿಲ್ಲದ ಕಾರಣ ಬೀದಿದೀಪಗಳ ನಿರ್ವಹಣೆ ಮಾಡದಿರುವುದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಗರಂ ಆದರು. ಇಲ್ಲಿ ಕೆಪಿಸಿ ಯೋಜನಾ ಪ್ರದೇಶಕ್ಕಾಗಿ ತ್ಯಾಗ ಮಾಡಿದವರಿದ್ದಾರೆ. ಇಲ್ಲಿ ಸ್ಥಳೀಯವಾಗಿ ಜನರು ಬದುಕು ಕಟ್ಟಿಕೊಂಡಿದ್ದಾರೆ. ಯಾವ ಕಾರಣಕ್ಕೂ ನಿಗಮದವರು ಬೀದಿ ದೀಪಗಳ ನಿರ್ವಹಣೆ ನಿಲ್ಲಿಸಬಾರದು ಎಂದು ಕೆಪಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಪಂ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮೀ, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಸದಸ್ಯರಾದ ಬಾಲಸುಬ್ರಹ್ಮಣ್ಯ, ಪಿ.ಮಂಜುನಾಥ್, ಉಮೇಶ್, ವಾಸಂತಿ ರಮೇಶ್, ಕೆ.ಸಿ.ಹರೀಶ್, ಲಲಿತಾ ಮಂಜುನಾಥ್, ಕಾಂಗ್ರೆಸ್ ಮುಖಂಡ ವಿ.ಸಂತೋಷ್‌ಕುಮಾರ್, ಆಶ್ರಯ ಸಮಿತಿ ಸದಸ್ಯರಾದ ಎಚ್.ಎಸ್.ಸಾದಿಕ್, ಮಂಜುಳಾ, ಅಧಿಕಾರಿಗಳು ಇದ್ದರು.