ನ್ಯೂಸ್

ಸರ್ಕಾರದ ವಿರುದ್ಧ ಶಾಸಕರ ಅಳಲು ವಿಪರ್ಯಾಸ; ಜೆಡಿಎಸ್ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿರುವ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕರೇ ಅಳಲು ತೋಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರ ಹಾಗೂ ಮಂತ್ರಿಗಳ ವಿರುದ್ಧ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಸಾರ್ವಜನಿಕ ಸಭೆಯಲ್ಲಿ ರೈತರನ್ಮು ಬದುಕಿಸಿ ಎಂದು ಸರ್ಕಾರಕ್ಕೆ ಗೋಗೆರೆಯುವ ದಯನೀಯ ಸ್ಥಿತಿಗೆ ಬಂದಿದ್ದಾರೆ.ರಾಜ್ಯದಲ್ಲಿ ಕಳೆದ 16 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ಬೇಜವಾಬ್ದಾರಿ ಆಡಳಿತಕ್ಕೆ ಸಾಕ್ಷಿ ಎಂದು ಜೆಡಿಎಸ್ ಕಿಡಿಕಾರಿದೆ.

ಶಾಸಕರಿಗೆ ನಯಾಪೈಸೆ ಅನುದಾನ ನೀಡುತ್ತಿಲ್ಲ, ಒಂದೂ ಅಭಿವೃದ್ಧಿ ಯೋಜನೆಗಳಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಮಾತನ್ನು ಹೇಳುತಿದ್ದಾರೆ ಎಂದರೇ ಭ್ರಷ್ಟ ಮುಖ್ಯಮಂತ್ರಿ ಮತ್ತು ಸಚಿವರು ಯಾವ ಪರಿ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ ಎಂಬುದನ್ನು ಕರ್ನಾಟಕದ ಮತದಾರರು ಅರ್ಥಮಾಡಿಕೊಳ್ಳಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.

ರಾಜ್ಯ ಬೊಕ್ಕಸ ಬರಿದುಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಕಾಂಗ್ರೆಸ್ ಬರೀ ದಿನ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತ ಜನರಿಗೆ ಮಂಕುಬೂದಿ ಎರಚುತ್ತಿದೆ. ಈ ದುಷ್ಟ ರೈತ ವಿರೋಧಿ, ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.