ಬಾಗಲಕೋಟೆ/ ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕೂಗು ದನಿ ಪಡೆದುಕೊಳ್ಳುತ್ತಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಹೊಸ ದಾಳ ಉರುಳಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೆಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಎಂ ‘ಹೈಕಮಾಂಡ್ ಈಸ್ ಹೈಕಮಾಂಡ್. ಆದರೆ, ಹೈಕಮಾಂಡ್ ಜತೆಗೆ ಶಾಸಕರ ನಿರ್ಧಾರವೂ ಮುಖ್ಯ ಆಗುತ್ತದೆ’ ಎನ್ನುವ ಮೂಲಕ ತಮ್ಮ ಬೆನ್ನ ಹಿಂದಿರುವ ಶಕ್ತಿಯನ್ನು ಓರೆಗೆ ಹಚ್ಚಿದ್ದಾರೆ.
ತಮ್ಮಅಧಿಕೃತ ನಿವಾಸ ಕಾವೇರಿಯಲ್ಲಿ ಸೋಮವಾರ ರಾತ್ರಿ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ನಿಗದಿಪಡಿಸಿದ್ದ ಸಿಎಂ ಅದಕ್ಕೂ ಮೊದಲೇ ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಶಾಸಕರ ಬೆಂಬಲ ಇಲ್ಲದೆ ಯಾರೂ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಬಹುಮತ ಇದ್ದರೆ ಮಾತ್ರ ಸಿಎಂ ಆಗುವುದು. ಇದರ ಜತೆಗೆ ವರಿಷ್ಠರ ಆಶೀರ್ವಾದವೂ ಬೇಕು ಎಂದರು.
ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಕುರಿತು ಪ್ರಸ್ತಾಪವಾದಾಗಲೆಲ್ಲ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಮಾರ್ವಿುಕವಾಗಿ ಹೇಳುತ್ತಾ ಬಂದಿದ್ದಾರೆ. ಆದರೆ, ಶಾಸಕರ ಬಲವೂ ಬೇಕು ಎನ್ನುವ ಮೂಲಕ ಸಿದ್ದರಾಮಯ್ಯ ಬಲಾಬಲ ಪ್ರದರ್ಶನದ ಸುಳಿವು ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ವಿಶ್ಲೇಷಿಸಿವೆ. ಇನ್ನು ಸಚಿವರಿಗೆ ಏರ್ಪಡಿಸಿರುವ ಔತಣ ಕೂಟ ಸಂಪುಟ ಪುನಾರಚನೆ ಕುರಿತ ಚರ್ಚೆಗೆ ಬಲ ಕ್ರೋಡೀಕರಿಸಿಕೊಳ್ಳುವ ತಂತ್ರವೆಂದು ಒಂದು ಬಣ ಹೇಳಿದರೆ, ಸಚಿವರನ್ನು ಊಟಕ್ಕೆ ಕರೆಯುವುದು ಅಪರಾಧವೇ ಎಂದು ವಿಧಾನಸೌಧದಲ್ಲಿ ಪತ್ರಕರ್ತರಿಗೆ ಮರು ಪ್ರಶ್ನಿಸಿದ್ದ ಸಿದ್ದರಾಮಯ್ಯ, ಸಂಜೆ ಔತಣಕೂಟದಲ್ಲಿ ಪ್ರತಿಯೊಬ್ಬ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಒಬ್ಬೊಬ್ಬರ ಬಳಿ ಒಂದೊಂದು ವಿಚಾರ ಕೇಳಿದರು. ನನ್ನ ಬಳಿ ಇಲಾಖೆ ಬಗ್ಗೆ ಮಾಹಿತಿ ಕೇಳಿದರು. ಸಚಿವ ಸಂಪುಟ ಪುನಾರಚನೆ ವಿಚಾರ ಸಿಎಂ, ಡಿಸಿಎಂಗೆ ಬಿಟ್ಟಿದ್ದು. ಸಂತೋಷ್ ಲಾಡ್ ಕಾರ್ವಿುಕ ಇಲಾಖೆ ಸಚಿವ ಮುಂಬರುವ ಪಾಲಿಕೆ, ಜಿಲ್ಲಾ, ತಾಲೂಕು ಮತ್ತು ಗ್ರಾ.ಪಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆಯಾಗಿಲ್ಲ. ಯಾವ ಕ್ರಾಂತಿಯೂ ಇಲ್ಲ. ಭ್ರಾಂತಿಯೂ ಇಲ್ಲ. ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆ ಸಚಿವ
ಗೈರಾದ ಸಚಿವರು: ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಾರಣಕ್ಕೆ ಗೈರಾಗಿದ್ದರು. ಎನ್.ಎಸ್. ಬೋಸರಾಜು ಮತ್ತು ಜಮೀರ್ ಅಹ್ಮದ್ ವಿದೇಶ ಪ್ರವಾಸದಲ್ಲಿದ್ದಾರೆ. ಕೃಷ್ಣಬೈರೇಗೌಡ, ಹಾಸನಾಂಬೆ ಉತ್ಸವ ಸಲುವಾಗಿ ಹಾಸನದಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಸೇರಿ ಬಹುತೇಕ ಸಚಿವರು ಹಾಜರಾಗಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿದೇಶ ಪ್ರಯಾಣ ನಿಮಿತ್ತ ಸಿಎಂ ಅನುಮತಿ ಪಡೆದು ಬೇಗ ನಿರ್ಗಮಿಸಿದರು.
ಹೈಕಮಾಂಡ್ ನಿರ್ಧರಿಸಬಹುದು: ಮುಖ್ಯಮಂತ್ರಿ ಬದಲಾವಣೆಗೆ ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಆದರೆ, ಶಾಸಕರ ಅಭಿಪ್ರಾಯ ಬೇಡ ಅಂತಲೂ ಹೈಕಮಾಂಡ್ ತೀರ್ಮಾನ ಮಾಡಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾರ್ವಿುಕವಾಗಿ ಹೇಳಿದ್ದಾರೆ. ಶಾಸಕರ ಬಲವೇ ಮುಖ್ಯ. ಪಕ್ಷ ಗೆದ್ದ ಮೇಲೆ ಸಿಎಂ ಆಯ್ಕೆ ಆಗುತ್ತದೆ. ಹೈಕಮಾಂಡ್ ಕಳುಹಿಸುವ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು ವರದಿ ಕೊಡುತ್ತಾರೆ. ಆದರೆ, ಶಾಸಕ ಅಭಿಪ್ರಾಯ ಬೇಡ ಅಂತ ಹೈಕಮಾಂಡ್ ತೀರ್ಮಾನ ಮಾಡಲೂಬಹುದು ಎಂದು ಪರಮೇಶ್ವರ್ ಸೂಚ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಪುಟ ಸರ್ಜರಿ ಸುಳಿವು: ಹೈಕಮಾಂಡ್ ಸೂಚನೆ ನೀಡಿದರೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ನಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಅದಕ್ಕೆ ಮಾನಸಿಕವಾಗಿ ಸಚಿವರು ಸಿದ್ಧರಾಗಿರಬೇಕೆಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಯಾವ ಸಚಿವರನ್ನು ಕೈಬಿಟ್ಟು ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಆದರಿಂದ ಈ ಬಗ್ಗೆ ಹೆಚ್ಚಿನ ಗಮನಕೊಡದೆ ಇಲಾಖೆಯ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಮುಂಬರುವ ಗ್ರೇಟರ್ ಬೆಂಗಳೂರು ಹೊಸ ಪಾಲಿಕೆ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಬೇಕೆಂದು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸಚಿವರಿಗೆ ಡಿನ್ನರ್ ಪಾರ್ಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ನಾನು ಸಚಿವರಿಗೆ ಬಹಳ ಸಲ ಭೋಜನ ಕೊಟ್ಟಿದ್ದೇನೆ. ನಿಮಗೆ, ಬಿಜೆಪಿಯವರಿಗೆ ವಿಶೇಷತೆ ಕಾಣಿಸಿದೆ ಎಂದು ನಗುತ್ತಲೇ ಹೇಳಿದ ಸಿದ್ದರಾಮಯ್ಯ, ನವೆಂಬರ್ನಲ್ಲಿ ಯಾವುದೇ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ವಾಲ್ಮೀಕಿ ಸಮಾಜದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನಾರಚನೆಯ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.