ನ್ಯೂಸ್

ಬೆಂಕಿ ಹಚ್ಚುವ ಸ್ಟೌ ಕೊಡುವ ಜಾಯಮಾನ ನನ್ನದಲ್ಲ ಎಂದ ಪ್ರದೀಪ್ ಈಶ್ವರ್

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ನಾಲ್ಕೂ ವರೆ ವರ್ಷ ಸುಮ್ಮನೆ ಇದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬೆಂಕಿ ಹಚ್ಚುವ ಸ್ಟೌ ಕೊಡುವ ಜಾಯಮಾನ ತನ್ನದಲ್ಲ ಎಂದೇಳುವ ಮೂಲಕ ಮಾಜಿ ಸಚಿವ ಡಾ ಕೆ.ಸುಧಾಕರ್ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಪ್ರಭಾವಿಗಳು ಎದುರು ಜನ ಸಾಮಾನ್ಯರು ಗೆಲ್ಲಿಸಿರುವುದೇ ಜೀವನದ ಒಂದು ಮಹಾಭಾಗ್ಯ. ಇದಕ್ಕೆ ಅಧಿಕಾರ ಇರಲಿ, ಇಲ್ಲದಿರಲಿ ಈ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.

ಈ ಭಾಗದಲ್ಲಿ ಮಾಜಿ ಸಚಿವರು ಎದುರು ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಗೆಲ್ಲುವುದೇ ಕಷ್ಟ ಎಂಬ ಮಾತು ಹೇಳಲಾಗುತ್ತಿತ್ತು. ಇದರ ನಡುವೆ ಬಡ ಹುಡುಗನನ್ನು ಬೆಳೆಸಬೇಕೆಂಬ ಮನೋಭಾವನೆಯಲ್ಲಿ ಯುವ ಜನರು ಧೈರ್ಯದಿಂದ ಬೂತ್ ಮಟ್ಟದಲ್ಲಿ ಕುಳಿತು, ಗೆಲ್ಲಿಸಿದರು. ಇದಕ್ಕೆ ಹೇಳಿದಂತೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಸೀರೆ ವಿತರಣೆ, ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಹಲವು ಭರವಸೆಗಳನ್ನು ತ್ವರಿತವಾಗಿ ಈಡೇರಿಸಲಾಗಿದೆ ಎಂದರು.

ರೋಗಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರಿಗೆ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಾಗುತ್ತದೆ. ಅನೇಕ ಸಂದರ್ಭದಲ್ಲಿ ಆರೋಗ್ಯ ಸೇವೆ ಸಿಗದೇ ಬಡಜನರು ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ಮೊದಲು ತಪ್ಪಿಸಬೇಕಾಗಿದೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಅನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರ ಚಿಕಿತ್ಸೆಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಯುವ ಜನರು ಚುನಾವಣೆಯಲ್ಲಿ ಗೆದ್ದು ಬರುವಂತಾಗಲು ಶಾಸಕ ಪ್ರದೀಪ್ ಈಶ್ವರ್ ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ಮತ್ತಿತರರು ಇದ್ದರು.

ಬಾಕ್ಸ್

ಹೌದು ಹುಲೀಯಾ ಎಂದ

ಕ್ಷೇತ್ರದಲ್ಲಿ ಚುನಾವಣೆ, ಫÀಲಿತಾಂಶ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರು ಪ್ರಸ್ತಾಪಿಸುತ್ತಿದ್ದ ವೇಳೆ ಕಾರ್ಯಕರ್ತರೊಬ್ಬರು ಹೌದು, ಹುಲೀಯಾ ಎನ್ನುವ ಮೂಲಕ ಸ್ಥಳದಲ್ಲಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.

ಬಾಕ್ಸ್

೫ ಆಂಬ್ಯುಲೆನ್ಸ್ ವಾಹನಕ್ಕೆ ಚಾಲನೆ

ನಂದಿ, ಮಂಚೇನಹಳ್ಳಿ, ಪೆರೇಸಂದ್ರಗೆ ತಲಾ ೧ ಮತ್ತು ಚಿಕ್ಕಬಳ್ಳಾಪುರಕ್ಕೆ ೨ ಆಂಬ್ಯುಲೆನ್ಸ್ ವಾಹನವನ್ನು ನೀಡಲಾಗಿದೆ. ಇದರಲ್ಲಿ ನುರಿತ ತಜ್ಞರಿಂದ ತರಬೇತಿ ಪಡೆದ ಚಾಲಕರು ಮತ್ತು ಸಿಬ್ಬಂದಿ ಇರಲಿದ್ದು ತುರ್ತು ಚಿಕಿತ್ಸೆಯ ಜತೆಗೆ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಬಯಸುವವರು ಸೇವೆಯನ್ನು ಪಡೆದುಕೊಳ್ಳಬಹುದು. ದಿನದ ೨೪ ಗಂಟೆಯಲ್ಲಿ ಯಾವುದೇ ಕ್ಷಣದಲ್ಲಿ ಕರೆ ಮಾಡಿದರೂ ಸ್ಥಳಕ್ಕೆ ಬಂದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಮತ್ತೆ ಮನೆಗೆ ಬಿಡಲಾಗುತ್ತದೆ. ಇದೆಲ್ಲವೂ ಉಚಿತ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.