ನ್ಯೂಸ್

ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ: ಇ.ಡಿ. ಸಮನ್ಸ್ ಪ್ರಶ್ನಿಸಿದ್ದ ತೀರ್ಪು 8ಕ್ಕೆ

 ಬೆಂಗಳೂರು:  ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣದಲ್ಲಿ ಕೆಲ ದಾಖಲೆ ಒದಗಿಸುವಂತೆ ಇ.ಡಿ. (ಜಾರಿ ನಿರ್ದೇಶನಾಲಯ) ನೀಡಿರುವ ಸಮನ್ಸ್ ಪ್ರಶ್ನಿಸಿ ಆರ್.ಆರ್.ನಗರದ ಹನುಮಂತರಾಯಪ್ಪ ಪುತ್ರ ಅನಿಲ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಸೋಮವಾರ (ಸೆ.8) ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮುಗ್ದಂ ಅವರ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು ಈ ನೆಲೆಯಲ್ಲಿ ಕೆ.ಸಿ. ವೀರೇಂದ್ರಗೆ ಸಲಹೆ ನೀಡಿದ್ದಾರೆ ಅಷ್ಟೇ. ಇದನ್ನು ಪರಿಗಣಿಸದೆ ಅವರನ್ನು ಸುಖಾಸುಮ್ಮನೆ ಇ.ಡಿ. ವಿಚಾರಣೆಗೆ ಒಳಪಡಿಸಬಾರದು. ಇ.ಡಿ. ವ್ಯಾಪ್ತಿ ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿದೆ. ಈ ಎಲ್ಲ ಅಂಶದ ಮೇರೆಗೆ ಇ.ಡಿ. ಜಾರಿಗೊಳಿಸಿದ ಸಮನ್ಸ್ ತಡೆ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಇ.ಡಿ. ಪರ ವಕೀಲ ಅರವಿಂದ್ ಕಾಮತ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಕೀಲರಾಗಿರುವ ಕಾರಣಕ್ಕೆ ಅರ್ಜಿದಾರರಿಗೆ ಇ.ಡಿ. ಸಮನ್ಸ್ ಜಾರಿಗೊಳಿಸಿಲ್ಲ. ಬದಲಿಗೆ ಕೆ.ಸಿ. ವೀರೇಂದ್ರ ಅವರ ಕಂಪನಿ ಸೇರಿ ಹಲವು ವಾಣಿಜ್ಯ ಕಂಪನಿಗಳಲ್ಲಿ ಪಾಲುದಾರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಅಕ್ರಮ ಹಣ ಹೂಡಿಕೆ ಆರೋಪವಿದೆ. ಇದರ ಅನ್ವಯ ಸಮನ್ಸ್ ಜಾರಿಗೊಳಿಸಿಲಾಗಿದೆ ಎಂದು ಪೀಠದ ಮುಂದೆ ವಿವರಿಸಿದರು.

ಯಾವುದೇ ವ್ಯಕ್ತಿಯ ವಿರುದ್ಧ ಈ ತೆರನಾದ ಆರೋಪ ಕೇಳಿಬಂದಾಗ ಸಮನ್ಸ್ ಜಾರಿಗೊಳಿಸುವುದು ಕಾನೂನುಬದ್ಧ ಪ್ರಕ್ರಿಯೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಒಪ್ಪುವಂತಹದ್ದಲ್ಲ. ಇಲ್ಲಿ ಅರ್ಜಿದಾರರು ತನಿಖಾಧಿಕಾರಿಗಳ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.

ಈ ವೇಳೆ ಇ.ಡಿ. ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಪೀಠ, ನೀವು ಅರ್ಜಿದಾರರ ವಿರುದ್ಧ ನಾನಾ ರೀತಿಯಲ್ಲಿ ಆರೋಪ ಮಾಡಿದ್ದೀರಿ. ಅದನ್ನು ಸಾಬೀತುಪಡಿಸಲು ಪೂರಕ ದಾಖಲೆ ಬೇಕಲ್ಲವೇ? ಹೂಡಿಕೆ ಮಾಡಿದ್ದಾರೆ, ಪಾಲುದಾರಾಗಿದ್ದಾರೆ ಎಂಬ ಸಂಗತಿ ಸತ್ಯವೆಂದು ಒಪ್ಪಿಕೊಳ್ಳಲು ದಾಖಲೆ ಬೇಕಲ್ಲವೇ ಎಂದು ಪ್ರಶ್ನಿಸಿತು.

ಇದಕ್ಕೆ ಇ.ಡಿ. ಪರ ವಕೀಲರು ದಾಖಲೆ ಸಲ್ಲಿಸುವುದಾಗಿ ನುಡಿದರು. ಅರ್ಜಿದಾರರ ಪರ ವಕೀಲರು ವಾದ ಮುಂದುವರಿಸಿ ಇ.ಡಿ. ಪರ ವಕೀಲರ ವಾದದಲ್ಲಿ ಹುರುಳಿಲ್ಲ. ಪೀಠ ಈ ವಾದವನ್ನು ಒಪ್ಪಿಕೊಂಡರೆ ಅರ್ಜಿದಾರರ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಒದಗಿಸುವ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಸಿದಂತಾಗುತ್ತದೆ ಎಂದರು. ನಮ್ಮ ಕಕ್ಷಿದಾರರಿಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ. ವಕೀಲನಾಗಿ ಅವರು ಶಾಸಕ ವೀರೇಂದ್ರ ಪಪ್ಪಿಗೆ ಸಲಹೆ ನೀಡಿದ್ದಾರಷ್ಟೇ. ಈ ಹೇಳಿಕೆಗೆ ಬದ್ಧರಾಗಿರುವುದಾಗಿ ನುಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದ್ದು, ಸೋಮವಾರ ಪ್ರಕಟಿಸುವುದಾಗಿ ಹೇಳಿದೆ. ಜತೆಗೆ ಅರ್ಜಿ ಸಂಬಂಧ ನ್ಯಾಯಾಲಯ ಆದೇಶ ಪ್ರಕಟಿಸುವವರೆಗೂ ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಇ.ಡಿ. ನ್ಯಾಯಪೀಠ ಸೂಚಿಸಿದೆ.