ನ್ಯೂಸ್

ಸಿಎಂ ಆರ್ಥಿಕ ಸಲಹೆಗಾರರ ಹೇಳಿಕೆಗೆ ಕೈ ಶಾಸಕ ಆಕ್ಷೇಪ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿದ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ಆಕ್ಷೇಪ ಕೇಳಿಬರುತ್ತಿದೆ.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೂಡ ಶನಿವಾರ ಪತ್ರಿಕಾ ಹೇಳಿಕೆ ನೀಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನತೆಯೇ ಕೊಂಡಾಡುತ್ತಿರುವಾಗ ಇಂತಹ ಗೊಂದಲಮಯ ಹೇಳಿಕೆಯನ್ನು ಯಾರೂ ಸಹ ನೀಡಬಾರದು. ಇಂತಹ ಹೇಳಿಕೆಗಳನ್ನು ಮುಂದೆ ಯಾರೂ ನೀಡದಂತೆ ಕೂಡಲೇ ಸಿಎಂ ಹಾಗೂ ಡಿಸಿಎಂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ 223 ತಾಲೂಕುಗಳಲ್ಲಿ ತೀವ್ರತರದ ಬರ ಪರಿಸ್ಥಿತಿ ಇತ್ತು. ಆದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಬರೆದ ಬಿಸಿ ಅಷ್ಟಾಗಿ ತಟ್ಟಲಿಲ್ಲ ಎಂದಿರುವ ಅವರು ರಾಯರೆಡ್ಡಿ ಹೇಳಿಕೆ ಆಕ್ಷೇಪಾರ್ಹ ಎಂದು ಪ್ರತಿಪಾದಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಆಯವ್ಯಯವು 3 ಲಕ್ಷ 73 ಸಾವಿರ ಕೋಟಿ ರೂಪಾಯಿ ಇದೆ. ಇದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷ 20 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಇನ್ನು ಗ್ಯಾರಂಟಿ ಯೋಜನೆಗಳಿಗೆ 58,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇನ್ನು ಸಾಮಾಜಿಕ ಪಿಂಚಣಿ, ಸರ್ಕಾರಿ ನೌಕರರ ವೇತನ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆಯು ಸಹ ಸಮರ್ಪಕವಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಮೀಸಲಿಟ್ಟೇ ಎಲ್ಲ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

5 ಪ್ರಮುಖ ಗ್ಯಾರಂಟಿ ಯೋಜನೆಗಳ ಸಹಿತ ಇನ್ನಿತರ ಆಶ್ವಾಸನೆಗಳನ್ನು ಸಿಎಂ, ಡಿಸಿಎಂ ಈಡೇರಿಸುತ್ತಾ ಬರುತ್ತಿದ್ದಾರೆ. ಹೀಗೆ ಅಭಿವೃದ್ಧಿ ಕಾರ್ಯಗಳ ಸಹಿತ ಗ್ಯಾರಂಟಿ ಯೋಜನೆಗಳನ್ನು ಸಹ ನಿಲ್ಲಿಸದೇ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಸರಿಯಾದ ಮಾಹಿತಿಯನ್ನು ಪಡೆದು ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತಿರಬೇಕಾದರೆ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಇಂತಹ ಹೇಳಿಕೆಗಳನ್ನು ನೀಡಬಾರದು. ಈಗಾಗಲೇ ರಾಜ್ಯದಲ್ಲಿ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಫಲಾನುಭವಿಗಳಿದ್ದಾರೆ. ಅವರೆಲ್ಲರಿಗೂ ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟರಾಗಿದ್ದಾರೆ ಎಂದು ತಿಳಿಸಿದ್ದಾರೆ.