ಹುಣಸೂರು : ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಡಿ, ಗಾವಡಗೆರೆ ಶಾಲಾ-ಕಾಲೇಜುಗಳಲ್ಲಿ ರ‌್ಯಾಗಿಂಗ್ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಗಮನಿಸಬೇಕು, ಗಾವಡಗೆರೆಯಲ್ಲಿ ಸರ್ಕಾರಿ ಪಬ್ಲಿಕ್ ಶಾಲೆಗೆ ಭೂಮಿ ದಾನ ಮಾಡಿದ ಸುಬ್ಬರಾವ್ ಘಾಟ್ಕೆ ಹೆಸರನ್ನಿಡಿ ಸರ್…
ತಾಲೂಕಿನ ಗಾವಡಗೆರೆ ಹೋಬಳಿ ಕೇಂದ್ರದ ಶ್ರೀ ಶಿವ ಛತ್ರಪತಿ ಮರಾಠ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಸಾರ್ವಜನಿಕರಿಂದ ಹರಿದುಬಂದ ಅಹವಾಲುಗಳ ಪರಿ ಇದು.
ಗಾವಡಗೆರೆ ಗ್ರಾ.ಪಂ. ಸದಸ್ಯ ಶ್ರೀನಾಥ್ ಮಾತನಾಡಿ, ಗಾವಡಗೆರೆಯ ಶಾಲಾ-ಕಾಲೇಜುಗಳ ಆವರಣದಲ್ಲಿ ರ‌್ಯಾಗಿಂಗ್ ಪಿಡುಗು ಹಬ್ಬಿದ್ದು, ಪೊಲೀಸರು ಮತ್ತು ಶಿಕ್ಷಕರು ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಸಂಜೆ ವೇಳೆ ಮುಖ್ಯರಸ್ತೆಯಲ್ಲಿ ಪುಂಡರು ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಪೊಲೀಸರು ಇತ್ತ ಗಮನಹರಿಸಬೇಕು ಎಂದು ಕೋರಿದರು.
ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ದಿ. ಸುಬ್ಬರಾವ್ ಘಾಟ್ಕೆ ಗ್ರಾಮದಲ್ಲಿ ಡೇರಿ ಸ್ಥಾಪನೆ, ಶಾಲಾ- ಕಾಲೇಜು, ಬಸ್ ನಿಲ್ದಾಣ, ಪಶುವೈದ್ಯ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಹೀಗೆ ಹಲವಾರು ಕಟ್ಟಡಗಳ ನಿರ್ಮಾಣಕ್ಕೆ ತಮ್ಮ ಸ್ವಂತ 14 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರಿಂದಲೇ ಇಂದು ಗ್ರಾಮದಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಗ್ರಾಮದಲ್ಲಿರುವ ಸರ್ಕಾರಿ ಪಬ್ಲಿಕ್ ಶಾಲೆಗೆ ಸುಬ್ಬರಾವ್ ಘಾಟ್ಕೆ ಹೆಸರನ್ನು ಇಡುವ ಮೂಲಕ ಅವರನ್ನು ಗುರುತಿಸುವ ಜವಾಬ್ದಾರಿ ತಾಲೂಕು ಆಡಳಿತದ ಮೇಲಿದೆ. ಗ್ರಾಮದಲ್ಲಿರುವ ನಾಡ ಕಚೇರಿ ಬಾಡಿಗೆ ಕಟ್ಟಡದಲ್ಲಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ತಾಲೂಕು ಆಡಳಿತ ನಿವೇಶನ ಗುರುತಿಸಬೇಕು ಎಂದು ಒತ್ತಾಯಿಸಿದರು.