ಸೋಮವಾರಪೇಟೆ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶಾಸಕ ಡಾ.ಮಂತರ್‌ಗೌಡ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.  
ನ್ಯೂಸ್

ಬಾಲಕರ ಹಾಸ್ಟೆಲ್‌ಗೆ ಶಾಸಕ ದಿಢೀರ್ ಭೇಟಿ

ಸೋಮವಾರಪೇಟೆ: ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಕ್ಕೆ ಶಾಸಕ ಡಾ.ಮಂತರ್‌ಗೌಡ ಇತ್ತೀಚೆಗೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಆಹಾರದ ಗುಣಮಟ್ಟ ಮತ್ತು ವಸತಿ ಸೌಲಭ್ಯಗಳ ಬಗ್ಗೆ ಗೌಪ್ಯವಾಗಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಪರೀಕ್ಷೆ ಸಂದರ್ಭ ಸಮಯವನ್ನು ಹಾಳು ಮಾಡದೆ, ಓದಿಕೊಳ್ಳಬೇಕು. ಜ್ಞಾನ ಸಂಪಾದಿಸಬೇಕಾದರೆ ತಪಸ್ಸಿನಂತೆ ಓದಬೇಕು. ಮುಂಜಾನೆ ಬೇಗ ಎದ್ದು ಓದಿ ಮನನ ಮಾಡಿಕೊಂಡರೆ, ಪರೀಕ್ಷೆ ಬರೆಯುವಾಗ ಬಹುಬೇಗ ಜ್ಞಾಪಕಕ್ಕೆ ಬರುತ್ತದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಉನ್ನತ ಶಿಕ್ಷಣದೊಂದಿಗೆ ಉತ್ತಮ ನೌಕರಿ ಗಿಟ್ಟಿಸಿಕೊಂಡರೆ, ತಂದೆ-ತಾಯಿ ಕನಸನ್ನು ನನಸು ಮಾಡಿದಂತೆ ಎಂದರು.

ಪಠ್ಯದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಯನ್ನು ಕೇಳಿದರು. ಪರೀಕ್ಷೆ ಸಂದರ್ಭದಲ್ಲಿ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಕೆಲವು ಟಿಪ್ಸ್‌ಗಳನ್ನು ಕೊಟ್ಟರು. ಏನಾದರೂ ಸಮಸ್ಯೆ ಇದ್ದರೆ, ತನ್ನ ಕಚೇರಿಗೆ ಬಂದು ಕಂಡು ಮಾತನಾಡಬಹುದು ಎಂದು ಹೇಳಿದರು. ಇದ್ದಕ್ಕಿದ್ದಂತೆ ಆಗಮಿಸಿದ ಶಾಸಕರನ್ನು ಕಂಡ ವಿದ್ಯಾರ್ಥಿಗಳು ತಬ್ಬಿಬ್ಬಾದರೂ ನಂತರ ಸಾವರಿಸಿಕೊಂಡು ಕಲಿಕೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು.