ಕಡೂರಿನಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಮಂಜುನಾಥ್, ಕುಮಾರ್, ಮಲ್ಲಿಕಾರ್ಜುನ್, ನಾಗರಾಜ್, ಜ್ಯೋತಿ ಆನಂದ್ ಇತರರಿದ್ದರು. 
ನ್ಯೂಸ್

ದೇವಾಲಯಗಳ ಅಭಿವೃದ್ಧಿಗೆ 45 ಲಕ್ಷ ರೂ. ಅನುದಾನ

ಕಡೂರು: ಕ್ಷೇತ್ರದ ಗಂಗಾಮತಸ್ಥ ಸಮಾಜದ ದೇವಾಲಯಗಳ ಅಭಿವೃದ್ಧಿಗಾಗಿ 45 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಪಂನಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿ, ಗಂಗಾಮತಸ್ಥ ಸಮಾಜ ವಾಸಿಸುವ ಬಹುತೇಕ ಗ್ರಾಮಗಳು ಪ್ರಗತಿಯಲ್ಲಿ ಹಿಂದೆ ಬಿದ್ದಿದ್ದು ಆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ವಾತಂತ್ರೃ ಬಂದು 75 ವರ್ಷ ಕಳೆದರೂ ಸಮಾಜಕ್ಕೆ ನಿರ್ದಿಷ್ಟ ದೇವಾಲಯಗಳು ಅಭಿವೃದ್ಧಿಗೊಳ್ಳದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ನನ್ನ ಅನುದಾನದಡಿ ಅಂಚೇಚೋಮನಹಳ್ಳಿ, ಮಲ್ಲಿದೇವಿಹಳ್ಳಿ ಗ್ರಾಮಗಳ ದೇವಾಲಯ ಅಭಿವೃದ್ಧಿಗೆ ತಲಾ 10 ಲಕ್ಷ, ತುರುವನಹಳ್ಳಿ ಗ್ರಾಮದಲ್ಲಿ 5 ಲಕ್ಷ, ಮತಿಘಟ್ಟ ಗ್ರಾಮದಲ್ಲಿ 3 ಲಕ್ಷ ಹಾಗೂ ಪಟ್ಟಣದಲ್ಲಿ ನಿರ್ಮಾಣವಾಗುವ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮಾಜ ಮುಂದೆ ಬರಬೇಕಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜಕಾರಣ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೊಳಿಸಬೇಕಿದೆ ಎಂದರು.
12ನೇ ಶತಮಾನದಲ್ಲಿ ಶೋಷಿತ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಮೇಲಿನ ಶೋಷಣೆಯನ್ನು ಅಂಬಿಗರ ಚೌಡಯ್ಯ ಅವರು ಕಟುವಾಗಿ ವಿರೋಧಿಸುತ್ತಿದ್ದರು. ಯಾವುದೇ ಒಂದು ವಿಷಯವನ್ನು ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಹೇಳುತ್ತಿದ್ದರು. ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವ ಕೆಲಸ ಮಾಡಿದ್ದರು. ಕಾಯಕಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಗಂಗಾಮತಸ್ಥ ಸಮಾಜದಿಂದ ಹಮ್ಮಿಕೊಂಡಿರುವ ಅದ್ದೂರಿಯ ಅಂಬಿಗರ ಚೌಡಯ್ಯ ಜಯಂತಿಯು ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ಗಂಗಾಮತಸ್ಥ ಸಮಾಜದ ರಾಜ್ಯ ನಿರ್ದೇಶಕ ಎನ್.ವಿ.ಕುಮಾರ್, ಶಿಕ್ಷಕ ನಾಗರಾಜ್, ಪುರಸಭೆ ಸದಸ್ಯೆ ಜ್ಯೋತಿ ಆನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್, ರೇವತಿ ನಾಗರಾಜ್, ಮಹೇಶ್, ರಸೂಲ್ ಖಾನ್ ಇತರರಿದ್ದರು.