ನ್ಯೂಸ್

ಹಿಂದುತ್ವ ಎನ್ನುತ್ತಾ ಜಾತಿ ರಾಜಕಾರಣ ಮಾಡುವ ಯತ್ನಾಳರನ್ನು ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿಸಿ; ಕಾರ್ಯಕರ್ತರಿಂದ ಹೈಕಮಾಂಡ್‌ಗೆ ಒತ್ತಾಯ

ವಿಜಯಪುರ: ರಾಜಕೀಯಕ್ಕಾಗಿ ಹಿಂದುತ್ವದ ಪ್ರತಿಪಾದನೆ ಮಾಡುತ್ತಾ ಒಳಗೊಳಗೆ ಜಾತಿ ರಾಜಕಾರಣ ಮಾಡುವ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಬಲೇಶ್ವರ ಕ್ಷೇತ್ರಕ್ಕೆ ಕಳುಹಿಸಿ, ನಗರ ಕ್ಷೇತ್ರಕ್ಕೆ ಮಾತ್ರ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಟಿಕೆಟ್ ಕೊಡಿ ಎಂದು ಮಹಾನಗರ ಪಾಲಿಕೆ ಟಿಕೆಟ್ ವಂಚಿತ ಮನನೊಂದ ಬಿಜೆಪಿ ಕಾರ್ಯಕರ್ತರು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ.

ಯತ್ನಾಳರು ಹಿಂದು ಹುಲಿ ಅಲ್ಲವಾ? ರಾಜ್ಯಮಟ್ಟದ ನಾಯಕರಲ್ಲವೇ? ಅವರು ಎಲ್ಲಿ ಕೊಟ್ಟರೂ ಆಯ್ಕೆಯಾಗುತ್ತಾರಲ್ಲವೇ? ಹಾಗಿದ್ದರೆ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿಸಿ. ಅಲ್ಲಿನ ಆಕಾಂಕ್ಷಿಗಳ ಮನವೊಲಿಸಿ ಪಕ್ಷದ ಉನ್ನತ ಸ್ಥಾನಮಾನ ನೀಡಿದರೆ ಹೆಚ್ಚುವರಿಯಾಗಿ ಒಂದು ಸ್ಥಾನ ಬಿಜೆಪಿಗೆ ಧಕ್ಕಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಈ ಸೂತ್ರ ಅನುಸರಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಭಾರತೀಯ ಜನತಾ ಪಕ್ಷ ಉಳಿಯಬೇಕಾದರೆ ಕಾರ್ಯಕರ್ತರು ಉಳಿಯಬೇಕು. ಆದರೆ ಕಾರ್ಯಕರ್ತರನ್ನು ಕಡೆಗಣಿಸಿ ವ್ಯಕ್ತಿಯ ಹಿಂಬಾಲಕರಿಗೆ ಆದ್ಯತೆ ನೀಡುತ್ತಿರುವ ಯತ್ನಾಳ ತಮ್ಮ ‘ಪಿಎ’ಗಳ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ. ಗೋಶಾಲೆ ಮೂಲಕ, ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಆಸ್ಪತ್ರೆ ತೆಗೆಯುವ ಮೂಲಕ, ಬ್ಯಾಂಕ್‌ಗಳ ಮೂಲಕ ಯತ್ನಾಳ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಿದ ಅವರು, ಶಾಸಕ ಯತ್ನಾಳ ಟಿಕೆಟ್ ಸಿಗದೇ ಹೋದರೆ ಈ ಹಿಂದೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತ್ರ ಟಿಕೆಟ್ ಸಿಗದೇ ಹೋದರೂ ಪಕ್ಷ ನಿಷ್ಠರಾಗಿ ಉಳಿದಿದ್ದಾರೆ. ಹೀಗಾಗಿ ನಿಷ್ಠಾವಂತರಿಗೆ ಪಕ್ಷ ಬೆಲೆ ಕೊಡಬೇಕೆಂದು ಆಗ್ರಹಿಸಿದರು.

ಹಿಂದುಗಳ ವಿರುದ್ಧವೇ ಹೇಳಿಕೆ

ರಾಜಕೀಯಕ್ಕಾಗಿ ಹಿಂದುತ್ವದ ಪ್ರತಿಪಾದನೆ ಮಾಡುವ ಯತ್ನಾಳ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳ ವಿರುದ್ಧವೇ ಆಪಾದನೆ ಮಾಡುತ್ತಾರೆ. ಲಿಂಗಾಯತ ನಾಯಕರ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಅವಹೇಳನ ಮಾಡುತ್ತಾರೆ. ಬಣಜಿಗ ಸಮುದಾಯಕ್ಕೆ ಬೈಯ್ಯುತ್ತಾರೆ. ಕುರುಬ, ಬ್ರಾಹ್ಮಣ ಹೀಗೆ ಅನೇಕ ಸಮುದಾಯಗಳ ಹಾಗೂ ನಾಯಕರನ್ನು ನಿಂದಿಸುತ್ತಾರೆ. ಮುಸ್ಲಿಂರೇ ಹೇಳುವ ಹಾಗೆ ಜೆಡಿಎಸ್ ಸೇರಿದಾಗ ಮುಸ್ಲಿಂ ಟೋಪಿ ಧರಿಸಿ, ಬಿರಿಯಾನಿ ತಿನ್ನುತ್ತಾರೆ. ಈಗಲೂ ಯತ್ನಾಳರು ಬಿರಿಯಾನಿ ತಿನುತ್ತಾರೆ, ಅದು ಕುರಿ, ಕೋಳಿ, ದನದ್ದು ಎಂದು ಸಹ ನೋಡುವುದಿಲ್ಲವಂತೆ. ಅಷ್ಟೇ ಏಕೆ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ತಮ್ಮದೇ ಪಂಚಮಸಾಲಿ ಸಮುದಾಯ ಬಲಿಕೊಟ್ಟರು. ಪಂಚಮಸಾಲಿ 2 ಎ ಮೀಸಲಾತಿ ಕೊಡಿಸುತ್ತೇವೆಂದು ಹೇಳಿ ಸಮುದಾಯದ ಸ್ವಾಮಿಯನ್ನು ಬಲಿಕೊಟ್ಟರು. ಇನ್ನೂ ಸ್ವಲ್ಪ ದಿನ ಕಳೆಯಲಿ ವಿಜಯಾನಂದ ಕಾಶಪ್ಪನವರಗೂ ಬೈಯ್ಯುತ್ತಾರೆಂದು ರವಿಕಾಂತ ಬಗಲಿ ವ್ಯಂಗ್ಯವಾಡಿದರು.

ಮುಖಂಡ ರಾಜು ಬಿರಾದಾರ ಮಾತನಾಡಿ, ಹಿಂದು ಹುಲಿ ಎಂದು ಬಿಂಬಿಸಿಕೊಳ್ಳುವ ಯತ್ನಾಳರ ಮೂಲ ಊರು ಯತ್ನಾಳ. ಅದು ಬಬಲೇಶ್ವರ ಕ್ಷೇತ್ರದಲ್ಲಿದೆ. ಹೀಗಾಗಿ ಅವರಿಗೆ ಬಬಲೇಶ್ವರಕ್ಕೆ ಟಿಕೆಟ್ ಕೊಡಿ. ಅಲ್ಲಿನ ಆಕಾಂಕ್ಷಿಗಳಿಗೆ ಬೇಕಾದರೆ ನಾವೂ ಕೈಕಾಲು ಬಿದ್ದು ಮನವೊಲಿಸುತ್ತೇವೆ. ಬಬಲೇಶ್ವರದಿಂದ ಯತ್ನಾಳ ಗೆದ್ದು ಬರಲಿ. ನಗರ ಕ್ಷೇತ್ರಕ್ಕೆ ಮಾತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇಲ್ಲವೇ ಬೇರೆ ಯಾರಿಗಾದರೂ ನಿಷ್ಠಾವಂತರಿಗೆ ಟಿಕೆಟ್ ಕೊಡಿ. ಸ್ವಂತಕ್ಕಾಗಿ ಬೆಳೆಯುವ ಯತ್ನಾಳರಿಂದ ಪಕ್ಷಕ್ಕೆ ಯಾವುದೇ ಕೊಡುಗೆ ಇಲ್ಲ ಎಂದರು.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಾಲುಮತ ಸಮುದಾಯ ಬಿಜೆಪಿಗೆ ಬೆಂಬಲಿಸಿತ್ತು. ಆದರೆ, ಈ ಬಾರಿ ಯತ್ನಾಳರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುವುದಿಲ್ಲ ಎಂದರು. ಮುಖಂಡರಾದ ಪ್ರಕಾಶ ಹಳ್ಳಿ, ಅಭಿಷೇಕ ಸಾವಂತ, ಚಿನ್ನು ಚಿನಗುಂಡಿ ಮತ್ತಿತರರಿದ್ದರು. ಇದನ್ನೂ ಓದಿ: ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ