B shivanna KSPCB CHAIRMAN 
ನ್ಯೂಸ್

ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಶಾಸಕ ಬಿ.ಶಿವಣ್ಣ ಅಧಿಕಾರ ಸ್ವೀಕಾರ- MLA B. Shivanna KSPCB Chairman

ಬೆಂಗಳೂರು: (MLA B. Shivanna KSPCB Chairman) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ(ಕೆಎಸ್‌ಪಿಸಿಬಿ) ನೂತನ ಅಧ್ಯಕ್ಷರಾಗಿ ಶಾಸಕ ಬಿ. ಶಿವಣ್ಣ ಗುರುವಾರ ಅಧಿಕಾರ ಸ್ವೀಕರಿಸಿದರು. ಮಂಡಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಪ್ತರು, ಮುಖಂಡರು,ಕಾರ್ಯಕರ್ತರು ಹೂಗುಚ್ಛ ನೀಡಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಬಿ.ಶಿವಣ್ಣ ಮಾತನಾಡಿ, ಮಂಡಳಿ ಕಾರ್ಯವೈಖರಿಗೆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಕೆಎಸ್‌ಪಿಸಿಬಿ ಸುಧಾರಣೆಗೆ ಹಲವು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ. ನದಿಗಳು, ಕೆರೆಗಳಿಗೆ ಕಲುಷಿತ ನೀರು ಹರಿಯುವುದು, ಪೀಣ್ಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ನಿರ್ವಹಣೆ, ವಾಯು ಮಾಲಿನ್ಯ ನಿಯಂತ್ರಣದ ಕುರಿತು ವಿಶೇಷ ಗಮನಹರಿಸಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೇಟ್ರರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳು, ಬೆಂಗಳೂರು ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳ ಸಭೆ ನಡೆಸುತ್ತೇನೆ. ನಗರದ ಜಲಮೂಲಗಳು ಹಾಗೂ ವಾಯು ಗುಣಮಟ್ಟ ಸುಧಾರಣೆಗೆ ಆದ್ಯತೆ ಮೇಲೆ ಕೆಲಸ ಮಾಡಲಾಗುವುದು ಎಂದರು.

ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯಕ್ಕೆ ಹೆಚ್ಚಳವಾಗುತ್ತಿದೆ. ಹಾಗಾಗಿ, ಹಸಿರು ಸಾರಿಗೆ, ವಿದ್ಯುತ್ ಚಾಲಿತ(ಇವಿ) ವಾಹನ ಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ. ಸಾರ್ವಜನಿಕರು ಹಾಗೂ ಉದ್ದಿಮೆಗಳು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಬರಬೇಕು. ಈ ಬಗ್ಗೆಯೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರಗಳು ಮತ್ತು ಮಂಡಳಿಗಳು ತ್ಯಾಜ್ಯ ನೀರು ನಿರ್ವಹಣೆ ಸರಿಯಾಗಿ ನಿರ್ವಹಿಸಬೇಕು. ಎಸ್‌ಟಿಪಿಗಳನ್ನು ಉನ್ನತೀಕರಿಸಬೇಕಿದೆ ಎಂದು ಶಿವಣ್ಣ ವಿವರಿಸಿದರು.

ಆಗಬೇಕಿದೆ ಹಲವು ಕಾರ್ಯಗಳು:

ನೀರು, ವಾಯು ಮಾಲಿನ್ಯ ತಡೆಗೆ ಮಂಡಳಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಗಾಗಿ, ಮಂಡಳಿಯ ಸುಧಾರಣೆಗೆ ಪರಿಣಾಮಕಾರಿಯಾಗಿ ಒತ್ತು ನೀಡಬೇಕಿದೆ. ರಾಜ್ಯದಲ್ಲಿ ದಿನೇದಿನೆ ಜಲ ಮತ್ತು ವಾಯು ಮಾಲಿನ್ಯ ಜಾಸ್ತಿಯಾಗುತ್ತಿದೆ. ಇದರ ತಡೆಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಮಾಲಿನ್ಯ ತಡೆಗೆ ಹೊಸ ಕಾನೂನುಗಳ ಜಾರಿಗೆ ತರಬೇಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ನಗರಾಭಿವೃದ್ಧಿ ಇಲಾಖೆ ಮಾಲಿನ್ಯ ತಡೆಗೆ ಹೊಣೆಗಾರಿಕೆ ಹಂಚಿಕೆ, ನದಿ ಮೇಲ್ವಿಚಾರಣಾ ವ್ಯವಸ್ಥೆ(ಆರ್‌ಎಂಎಸ್) ಸ್ಥಾಪನೆ, ಮಾಲಿನ್ಯ ತಡೆಗೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಮಂಡಳಿ ಕಾರ್ಯನಿರ್ವಹಣೆ ಮಾಡಬೇಕಿದೆ. ಖಾಲಿ ಉಳಿದಿರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಅವಧಿ ಮೀರಿದ ವಾಹನಗಳ ಬಳಕೆ ನಿಷೇಧ ಹಾಗೂ ವಿದ್ಯುತ್‌ಚಾಲಿತ ವಾಹನಗಳ ಬಳಕೆ ಉತ್ತೇಜನ ಸೇರಿ ಹಲವು ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಕೇರಳ ಮತ್ತು ಆಂಧ್ರಪ್ರದೇಶ, ನಮ್ಮ ಗಡಿ ಭಾಗದ ಜಿಲ್ಲೆಗಳಲ್ಲಿ ಅನಧಿಕೃತವಾಗಿ ವೈದ್ಯಕೀಯ ತಾಜ್ಯವನ್ನು ಸುರಿಯುವುದಕ್ಕೆ ಇನ್ನಷ್ಟು ಕಡಿವಾಣ ಹಾಕಬೇಕಿದೆ.