ಕೆಜಿಎಫ್​ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲಪಲ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧನಾ ಸಮಾವೇಶವನ್ನು ಶಾಸಕಿ ಎಂ.ರೂಪಕಲಾ ಉದ್ಘಾಟಿಸಿದರು.  
ನ್ಯೂಸ್

ಕ್ಷೇತ್ರಕ್ಕೆ ಹೆಚ್ಚಿನ ಅನುದಾನ; ಸಾಧನಾ ಸಮಾವೇಶದಲ್ಲಿ ಶಾಸಕಿ ಎಂ. ರೂಪಕಲಾ ಹೇಳಿಕೆ

Kolar

ಕೆಜಿಎಫ್: ಕ್ಷೇತ್ರದ ರೈತರು ಪಹಣಿ, ಮ್ಯುಟೇಷನ್​, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ದೂರದ ಬಂಗಾರಪೇಟೆ ತಾಲೂಕಿಗೆ ಅಲೆದಾಡಬೇಕಿತ್ತು. ಇದನ್ನು ತಪ್ಪಿಸಲು ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ತಾಲೂಕು ಆಡಳಿತ ಸೌಧ ನಿರ್ಮಿಸಲಾಗಿದೆ ಎಂದು ಶಾಸಕಿ ಎಂ. ರೂಪಕಲಾ ಹೇಳಿದರು.

ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲಪಲ್ಲಿಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ನೀಡಿದ ಕೆಜಿಎಫ್​ ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ದಿ.ಮಾಜಿ ಸಿಎಂ ಕೆಸಿ ರೆಡ್ಡಿ ಅವರ ಸಂಕೀರ್ಣ ನಿರ್ಮಿಸಲು 20 ಎಕರೆ ಜಮೀನು ಗುರಿತಿಸಿ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾಗಿ ತಿಳಿಸಿದರು.

ಬೇತಮಂಗಲದ ಸುಮಾರು ಒಂದು ಸಾವಿರ ಎಕರೆ ವಿಶಾಲವಾದ ಕೆರೆಯನ್ನು 20 ಜೆಸಿಬಿ ಯಂತ್ರಗಳನ್ನಿಟ್ಟುಕೊಂಡು ಸ್ವಚ್ಛಗೊಳಿಸಿದ್ದು, ವರುಣ ದೇವನ ಕೃಪೆಯಿಂದ ಕಳೆದ ಎರಡು ವರ್ಷಗಳಿಂದ ಮಳೆಯಾಗುತ್ತಿರುವುದರಿಂದ ಅಭಿವೃದ್ಧಿಪಡಿಸಿದಲ್ಲಿ ಪ್ರವಾಸಿ ತಾಣವಾಗಿ ಇಡೀ ಜಿಲ್ಲೆಯ ಜನರನ್ನು ಕೈಬೀಸಿ ಕರೆಯುತ್ತಿದೆ ಎಂದರು.

ಕೈಗಾರಿಕೆ ಹಬ್​ ನಿರ್ಮಾಣ: ಕೆಜಿಎಫ್​ ಸುತ್ತಮುತ್ತಲಿನ 970 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಂದ ಭರವಸೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಕೈಗಾರಿಕಾ ಹಬ್​ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ರೂಪಕಲಾ ಹೇಳಿದರು.

ಕೆಜಿಎಫ್​ ನಗರದ ಅಂಬೇಡ್ಕರ್​ ಶಾಲೆಯಿಂದ ಫೈವ್​ ಲೈಟ್ಸ್​ ವೃತ್ತ, ಎಲ್​ಐಸಿ ಕಚೇರಿಯಿಂದ ಉರಿಗಾಂ ರೈಲ್ವೆ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿ, ಸಲ್ಡಾನಾ ವೃತ್ತದಿಂದ ರಾಜೇಶ್​ ಕ್ಯಾಂಪ್​ವರೆಗೆ ರಸ್ತೆ ಅಭಿವೃದ್ಧಿ ಮತ್ತು ದ್ವಿಪಥ ರಸ್ತೆ ಅಭಿವೃದ್ಧಿಯನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಾಡುತ್ತಿದ್ದು, ಜನವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಹಿರಿಯ ಕಾಂಗ್ರೆಸ್​ ಮುಖಂಡ ವೆಂಕಟಕೃಷ್ಣರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಅ.ಮು.ಲ್ಮನಾರಾಯಣ, ವಿಜಯಶಂಕರ್​, ಎಪಿಎಂಸಿ ಅಧ್ಯಕ್ಷ ವಿಜಯರಾವರೆಡ್ಡಿ, ನಗರಸಭೆ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ, ಮಾಜಿ ಅಧ್ಯಕ್ಷ ರಮೇಶ್​ಜೈನ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮದುಲೈಮುತ್ತು, ಆನಂದಮೂರ್ತಿ, ಯೋಶೋದಮ್ಮ, ಬೇತಮಂಗಲ ವಿಎಸ್​ಎಸ್​ಎನ್​ ಅಧ್ಯಕ್ಷ ಪ್ರಸನ್ನ, ಸುಂದ್ರಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಂಬಾಬು, ಜಕ್ಕರಸಕುಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಮಾರಿಕುಪ್ಪ ಗ್ರಾಮ ಪಂಚಾಯಿತಿ ಅಧ್ಯೆ ಜಲಜಾ ಶಿವ ಇದ್ದರು.

ಚಿತ್ರ&30ಕೆಜಿಎಫ್​&1: