ತೀರ್ಥಹಳ್ಳಿ: ಅನ್ನದಾತರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ವಿಮಾ ಯೋಜನೆಯಲ್ಲಿ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡುತ್ತಿದೆ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೋಣಂದೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಕಿಸಾನ್ ಸಮ್ಮಾನ್ ಯೋಜನೆಯ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಾರಾಣಸಿಯಲ್ಲಿ ಬಿಡುಗಡೆ ಮಾಡುತ್ತಿದ್ದ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಯೋಜನೆಯ ಲಾನುಭವಿಗಳೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು.
ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಂದ ಸಂಕಷ್ಟಕ್ಕೀಡಾಗುವ ರೈತರ ನೆರವಿಗೆ ಈ ಯೋಜನೆ ಅತ್ಯಂತ ಸಹಕಾರಿ. ಈ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂ. ದೊರೆಯುತ್ತದೆ. ಅಡಕೆ ಬೆಳೆಗಾರರಿಗೆ ಇದು ದೊಡ್ಡ ಪರಿಹಾರದ ಮೊತ್ತವಲ್ಲ. ಆದರೆ ಭತ್ತ ಸೇರಿದಂತೆ ಆಹಾರ ಧಾನ್ಯ ಬೆಳೆಯುವವರ ಕಣ್ಣೀರು ಒರೆಸುವ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಕ್ರಮಬದ್ಧವಾಗಿ ಕಂತು ಕಟ್ಟಿದವರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ ಎಂದರು.
ಕೋಣಂದೂರು ಗ್ರಾಪಂ ಅಧ್ಯಕ್ಷೆ ಮಂಗಳಾ ಗೋಪಿ, ಹುಂಚದಕಟ್ಟೆ ಗ್ರಾಪಂ ಅಧ್ಯಕ್ಷೆ ಉಷಾ ತಾರಾನಾಥ್, ಕಟ್ಟೆ ಮಹೇಶ್, ಬಿಜ್ಜಳ ಧರಣಿ, ಸತೀಶ್ ಶೆಟ್ಟಿ ಹಾಗೂ ಕೃಷಿ ಅಧಿಕಾರಿ ಅಜಿತ್ ಇದ್ದರು.