MK Stalin: ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ದೀರ್ಘಕಾಲದಿಂದ ನಡೆಯುತ್ತಿರುವ ಕಚ್ಚತೀವ್ ವಿವಾದವನ್ನು ಪರಿಹರಿಸಲು ಮತ್ತು ಶ್ರೀಲಂಕಾದ ಜೈಲುಗಳಲ್ಲಿ ಬಂಧಿತರಾಗಿರುವ ಭಾರತೀಯ ಮೀನುಗಾರರು ಮತ್ತು ಅವರ ದೋಣಿಗಳನ್ನು ಬಿಡುಗಡೆ ಮಾಡಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತೆ ಒತ್ತಾಯಿಸಿದ್ದಾರೆ.
ಮೈಲಾಡುತುರೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಿಂದ ತಮಿಳುನಾಡಿನ ಮೀನುಗಾರರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಕಚ್ಚತೀವ್ ಸಮಸ್ಯೆಯನ್ನು ಕೇಂದ್ರ ಸರ್ಕಾರ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದುವರೆದು ಮಾತನಾಡಿದ ಸ್ಟಾಲಿನ್, ಪ್ರಧಾನಿಯವರ ಮಧ್ಯಸ್ತಿಕೆಯಿಂದ ಮಾತ್ರ ತಮಿಳುನಾಡಿನ ಮೀನುಗಾರರಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನ ಮೀನುಗಾರರು ಆಗಾಗ್ಗೆ ಅತಿಕ್ರಮಣ ಮಾಡುತ್ತಾರೆ ಮತ್ತು ಕೊಲಂಬೊ ಕಚ್ಚತೀವ್ ದ್ವೀಪವನ್ನು ಎಂದಿಗೂ ಹಿಂದಿರುಗಿಸುವುದಿಲ್ಲ ಎಂಬ ಶ್ರೀಲಂಕಾದ ಮೀನುಗಾರಿಕೆ ಸಚಿವ ಡೌಗ್ಲಾಸ್ ದೇವಾನಂದ ಹೇಳಿಕೆಯನ್ನು ಉಲ್ಲೇಖಿಸಿದ ಸ್ಟಾಲಿನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಏಕೆ ಇಂತಹ ಹೇಳಿಕೆಗಳನ್ನು ಅಲ್ಲಗಳೆದಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಸ್ಟಾಲಿನ್ ಟೀಕಿಸಿದರು.
ಕಚ್ಚತೀವ್ ದ್ವೀಪವನ್ನು ಮರಳಿ ಪಡೆಯುವಂತೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆ ಈಗಾಗಲೇ ನಿರ್ಣಯವನ್ನು ಅಂಗೀಕರಿಸಿದೆ ಎಂದ ಸ್ಟಾಲಿನ್, ಈ ವಿಷಯವನ್ನು ಪ್ರಧಾನಿಯವರೊಂದಿಗೆ ಹಲವು ಬಾರಿ ವೈಯಕ್ತಿಕವಾಗಿ ಪ್ರಸ್ತಾಪಿಸಿದರು ಪ್ರಯೋಜನವಾಗಿಲ್ಲ ಎಂದರು. ಕಚ್ಚತೀವ್ ಮರಳಿ ಪಡೆಯುವ ಪ್ರಯತ್ನಗಳನ್ನು ಡಿಎಂಕೆ ಸರ್ಕಾರ ಮುಂದುವರಿಸುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.
ಈ ವಿಷಯವು 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರಿಸಿದೆ. (ಏಜೆನ್ಸೀಸ್)