ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ ಪಾರ್ಟಿಹಾಲ್‌ನಲ್ಲಿ 2025ನೇ ಸಾಲಿನ ದಿನದರ್ಶಿಕೆಯನ್ನು ಮಿತ್ರ ಫೌಂಡೇಷನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಬಿಡುಗಡೆಗೊಳಿಸಿದರು.  
ನ್ಯೂಸ್

ನಿಸ್ವಾರ್ಥ ಸೇವೆಗೆ ಮಿತ್ರ ಫೌಂಡೇಷನ್ ಸ್ಥಾಪನೆ

ಕೆ.ಆರ್.ಪೇಟೆ : ಇಂದಿನ ರಾಜಕಾರಣ ಮೊದಲಿನಂತಿಲ್ಲ. ಇವತ್ತಿನ ರಾಜಕಾರಣದ ಸ್ಥಿತಿ ಹಣಬಲವಿದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ ಎಂಬಂತಾಗಿದೆ ಎಂದು ಮಿತ್ರ ಫೌಂಡೇಷನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸುಲೋಚನಮ್ಮ ಪಾರ್ಟಿ ಹಾಲ್‌ನಲ್ಲಿ 2025ನೇ ಸಾಲಿನ ದಿನದರ್ಶಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ನಿಸ್ವಾರ್ಥ ಸೇವೆ ಮಾಡುವ ಉದ್ದೇಶದಿಂದ ಮಿತ್ರ ಫೌಂಡೇಷನ್ ಸ್ಥಾಪಿಸಿದ್ದು ತಾಲೂಕಿನ ಜನತೆಗೆ ನನ್ನ ಕೈಲಾದಷ್ಟು ಸೇವೆ ಮಾಡುತ್ತಿದ್ದೇನೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ದೇವಾಲಯ ಜೀರ್ಣೋದ್ಧಾರ, ಆರೋಗ್ಯ, ವಿದ್ಯಾಭ್ಯಾಸ ಸೇರಿದಂತೆ ಹಲವು ಸೇವೆಗಳ ಮೂಲಕ ತಾಲೂಕಿನ ಜನರಿಗೆ ಸೇವೆ ಸಲ್ಲಿಸಿದ್ದೇನೆ. ನಾನು ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದವನು. ನನ್ನನ್ನು ಪ್ರೀತಿಯಿಂದ ಕಂಡ ನನ್ನ ತಾಲೂಕಿನ ಜನರಿಗೋಸ್ಕರ ಸೇವೆ, ಸಹಾಯ ಹಾಗೂ ರಾಜಕಾರಣ ಮಾಡಬೇಕಿದೆ. ಜನ ಶಕ್ತಿ ಇದ್ದರೆ ಮಾತ್ರ ರಾಜಕಾರಣದಲ್ಲಿ ಗೆಲ್ಲಬಹುದು. ರಾಜಕಾರಣ, ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಜನರ ಮನಸ್ಸಿನಲ್ಲಿ ಉಳಿಯಬೇಕಾದುದು ನಾಯಕರಾದವರ ಕರ್ತವ್ಯ. ನಾನು ನನ್ನ ದುಡಿಮೆಯ ಅರ್ಧದಷ್ಟು ಭಾಗವನ್ನು ಮಿತ್ರ ಫೌಂಡೇಷನ್ ವತಿಯಿಂದ ಸಮಾಜಸೇವಾ ಕಾರ್ಯಗಳಿಗೆ ಬಳಸುತ್ತಿದ್ದೇನೆ. ಇದು ನನ್ನ ತಂದೆತಾಯಿಯರ ಆಸೆಯಾಗಿತ್ತು. ಹೀಗಾಗಿ ಹಲವಾರು ವರ್ಷಗಳಿಂದ ಜನರ ಸೇವೆಯನ್ನು ಮಾಡುತ್ತಾ ಬಂದಿದ್ದು ಮುಂದೆಯೂ ತಾಲೂಕಿನ ಜನರ ಸೇವೆಗೆ ಸಿದ್ಧನಿರುತ್ತೇನೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪ್ರಗತಿಪರ ಕೃಷಿಕ ವಿಠಲಾಪುರ ಸುಬ್ಬೇಗೌಡ, ಮತ್ತಿಘಟ್ಟಕೃಷ್ಣಮೂರ್ತಿ, ರಾಮಸ್ವಾಮಿ, ಪ್ರೇಮ್ ಕುಮಾರ್, ಬಸವೇಗೌಡ, ಕೃಷ್ಣೇಗೌಡ ಜಯರಾಮ್ ವಿಜಯ್ ರಾಮೇಗೌಡರ ಆಪ್ತ ಸಹಾಯಕ ಬಸವರಾಜು ಸೇರಿದಂತೆ ವಿಜಯ್ ರಾಮೇಗೌಡರ ನೂರಾರು ಅಭಿಮಾನಿಗಳಿದ್ದರು.