ಕೊಲ್ಕತಾ : ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಕರೊನಾ ಹಿನ್ನೆಲೆಯಲ್ಲಿ ಪ್ರಚಾರ ವೇಳೆ ಕೋವಿಡ್ ಪ್ರೊಟೋಕಾಲ್ಅನ್ನು ಪಾಲಿಸಬೇಕೆಂಬ ಆದೇಶವಿದೆ. ಹೀಗಾಗಿ ರಾಜಕೀಯ ನಾಯಕರು, ಅಭ್ಯರ್ಥಿಗಳು ಮಾಸ್ಕ್ನಿಂದ ಮುಖ ಮುಚ್ಚಿಕೊಂಡು ಪ್ರಚಾರ ಮಾಡಲು ಪಾಡು ಪಡುತ್ತಿದ್ದಾರೆ. ಹೀಗೇ ಒಂದು ಪ್ರಚಾರ ಭಾಷಣದ ಸಂದರ್ಭದಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆದ ಬಾಲಿವುಡ್ ಹಿರಿಯ ನಟ ಮಿಥುನ್ ಚರ್ಕವರ್ತಿ ವಿಚಿತ್ರವಾಗಿ ಮಾಸ್ಕ್ ತೊಟ್ಟಿರುವ ಫೋಟೋ ವೈರಲ್ ಆಗಿದೆ.
ಟಿಎಂಸಿ ಯುವ ನಾಯಕ ದೇಬಾಂಗ್ಶು ಭಟ್ಟಾಚಾರ್ಯ ದೇವ್ ಅವರು, ಮಿಥುನ್ ಚಕ್ರವರ್ತಿ ನೀಲಿ ಬಣ್ಣದ ಮಾಸ್ಕ್ಅನ್ನು ತಮ್ಮ ಮೂಗಿನ ಮೇಲೆ ಹಾಕಿಕೊಂಡಿರುವ ಚಿತ್ರವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಮಾಸ್ಕ್, ಚಕ್ರವರ್ತಿ ಅವರ ಮೂಗು ಮತ್ತು ಒಂದು ಕಣ್ಣನ್ನು ಮುಚ್ಚಿದೆ, ಆದರೆ ಬಾಯನ್ನು ಮುಚ್ಚಿಲ್ಲ ! ಇದಕ್ಕೆ "ಮಿಥುನ್ ದಾ ಭಾರತಕ್ಕೆ ಡಿಸ್ಕೊ ಡ್ಯಾನ್ಸ್ ಸ್ಟೈಲ್ಅಲ್ಲಿ ಮಾಸ್ಕ್ ಧರಿಸುವುದು ಹೇಗೆ ಎಂದು ಕಲಿಸುತ್ತಿದ್ದಾರೆ" ಎಂದು ಭಟ್ಟಾಚಾರ್ಯ ಟಿಪ್ಪಣಿ ಬರೆದು ಟೀಕಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಮಿಥುನ್ ಚಕ್ರವರ್ತಿ ಬಂಗಾಳದಾದ್ಯಂತ ಹಲವಾರು ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ಕೊಲ್ಕತಾದಲ್ಲಿ ರಾಜೀಬ್ ಬ್ಯಾನರ್ಜಿ ಅವರೊಂದಿಗೆ ನಡೆಸುತ್ತಿದ್ದ ಕ್ಯಾಂಪೇನ್ ಸಂದರ್ಭದಲ್ಲಿ ಮಾತನಾಡಲು ಅನುಕೂಲವಾಗುವಂತೆ ಮಾಸ್ಕ್ಅನ್ನು ಮೇಲಕ್ಕೆ ಸರಿಸಿರುವುದು ಈ ಫೋಟೋದಲ್ಲಿ ಕಂಡುಬಂದಿದೆ. ಕೋವಿಡ್ ಮುನ್ನೆಚ್ಚರಿಕೆ ವಹಿಸದೆ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಬಿಜೆಪಿ ಪ್ರಚಾರ ನಡೆಸುತ್ತಿದೆ ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎನ್ನಲಾಗಿದೆ. (ಏಜೆನ್ಸೀಸ್)