ಬೆಂಗಳೂರು: ಕಾಂಗ್ರೆಸ್‌ನ ಪ್ರಬಲ ನಾಯಕರ ವಕ್ಫ್ ಭೂಮಿ ದುರುಪಯೋಗ, ದುರ್ಬಳಕೆ ಮತ್ತು ವಂಚನೆ ಕುರಿತು 40 ಸಾವಿರ ಪುಟಗಳ ದಾಖಲೆ(displayed 40,000 pages of documents on the misuse, abuse and fraud of Waqf land by powerful Congress leaders) ಗಳನ್ನು ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯ ಪ್ರದರ್ಶಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ವಕ್ಫ್ ಹಗರಣದಲ್ಲಿ ಹಾಲಿ ಮತ್ತು ಮಾಜಿ ಸಚಿವರು ಶಾಮೀಲಾಗಿರುವ ಬಗ್ಗೆ ದಾಖಲೆ ಸಮೇತ ಉಲ್ಲೇಖಿಸಿ, ಇದು ನ್ಯಾ.ಆನಂದ್ ಸಮಿತಿ ವರದಿಯ ಭಾಗವಾಗಿದೆ. ಸರ್ಕಾರ ಈ ದಾಖಲೆಗಳನ್ನು ನಿರ್ಲಕ್ಷಿಸುತ್ತಿದೆ. ತಾವು ಕೇಂದ್ರ ಸರ್ಕಾರಕ್ಕೆ ದಾಖಲೆ ಸಲ್ಲಿಸುವುದಾಗಿ ಹೇಳಿದರು. ನಾನು ತಂದಿರುವ ದಾಖಲೆಗಳು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಕೊಟ್ಟಿರುವ ದಾಖಲೆಗಳು. ಒಟ್ಟು 40 ಸಾವಿರ ಪುಟಗಳ ದಾಖಲೆ ಇದೆ. ವಕ್ಫ್ ಆಸ್ತಿಗಳ ತನಿಖೆಗೆ ಸರ್ಕಾರವು ನ್ಯಾ.ಎನ್. ಆನಂದ್ ಸಮಿತಿ ರಚಿಸಿತ್ತು. ನ್ಯಾ.ಆನಂದ್ ಎಲ್ಲ ಡಿಸಿಗಳಿಗೆ ಪತ್ರ ಬರೆದಿದ್ದರು. ಡಿಸಿಗಳು ನ್ಯಾ.ಆನಂದ್ ಸಮಿತಿಗೆ ಕೊಟ್ಟಿರುವ ಮಾಹಿತಿ ಇದು ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಆದರೆ, ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಕೆಲವು ದಾಖಲೆ ಮಿಸ್ ಆಗಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿ ಜಿಲ್ಲೆಗಳಲ್ಲಿ ಯಾವ್ಯಾವ ರೀತಿ ಹಗರಣ ಆಗಿದೆ ಎಂಬುದು ಈ ದಾಖಲೆಗಳಲ್ಲಿ ಇದೆ. ಬಹಳ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಕೂಡ ಈ ದಾಖಲೆಗಳಲ್ಲಿದೆ. ಹಾಲಿ ಸಚಿವರು, ಮಾಜಿ ಸಚಿವರ ಹೆಸರುಗಳು ಕೂಡ ಈ ದಾಖಲೆಗಳಲ್ಲಿವೆ. ನಾನು ಯಾವುದೇ ರಾಜಕಾರಣಿಗಳ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
ಸಮಗ್ರ ದಾಖಲೆಗಳನ್ನು ಆಧರಿಸಿ ನ್ಯಾ.ಆನಂದ್ ವರದಿ ತಯಾರಿಸಿದ್ದರು. ರಾಜ್ಯ ಸರ್ಕಾರ ಈ ದಾಖಲೆಗಳನ್ನು ಇಟ್ಟುಕೊಂಡು ಸುಮ್ಮನೆ ಕುಳಿತಿದೆ. ಇಷ್ಟು ದಾಖಲೆಗಳನ್ನು ಅಧ್ಯಯನ ಮಾಡಲು ನನ್ನಿಂದ ಸಾಧ್ಯವಿಲ್ಲ. ಈ ದಾಖಲೆಗಳನ್ನು ಸೋಮವಾರ ನಾನು ದೆಹಲಿಗೆ ತೆಗೆದುಕೊಂಡು ಹೋಗುತ್ತೇನೆ. ಕೇಂದ್ರ ಕಾನೂನು ಸಚಿವರು ಮತ್ತು ವಕ್ಫ್ ಆಸ್ತಿ ಕುರಿತ ಜೆಪಿಸಿಗೆ ದಾಖಲೆಗಳನ್ನು ಹಸ್ತಾಂತರ ಮಾಡುತ್ತೇನೆ ಎಂದು ತಿಳಿಸಿದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ, ಮುಸ್ಲಿಮರ ಬಗ್ಗೆ ನಿಜವಾದ ಕಳಕಳಿ ಇದ್ದಿದ್ದರೆ ಆಸ್ತಿ ಕಬಳಿಸಿದವರಿಗೆ ನೋಟಿಸ್ ಕೊಡಬೇಕಿತ್ತು. ರಾಜ್ಯ ಸರ್ಕಾರಕ್ಕೆ ಧೈರ್ಯ ಇದ್ದರೆ ನ್ಯಾ.ಆನಂದ್ ಸಮಿತಿ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಈ ಬಗ್ಗೆ ಒತ್ತಡ ಹಾಕುವಂತೆ ನಾನು ಪ್ರತಿಪಕ್ಷ ನಾಯಕರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ನಮ್ಮ ಶಾಸಕರು ಸದನದಲ್ಲಿ ವಿಷಯ ಎತ್ತಲಿ ಎಂದು ನಾನು ಆಗ್ರಹಿಸುತ್ತೇನೆ. ಕಲಬುರಗಿಯಿಂದ ಕಳುಹಿಸಿರುವ ದಾಖಲೆಗಳಲ್ಲಿ ಅಲ್ಲಿನ ಡಿಸಿ ಆಗಿದ್ದ ರಜನೀಶ್ ಗೋಯಲ್ ಅವರ ಸಹಿ ಇದೆ. ಕೆಲವು ದಾಖಲೆಗಳು ಮಿಸ್ಸಿಂಗ್ ಎಂದು ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆಯಾಗಬೇಕು. ರಾಜ್ಯಪಾಲರು ಈ ಬಗ್ಗೆ ಗಮನ ಹರಿಸಬೇಕು ಎಂದು ಲೆಹರ್ ಸಿಂಗ್ ಒತ್ತಾಯಿಸಿದರು.
ಮುಸ್ಲಿಂ ಸಮುದಾಯದವರೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಣ್ಣಪುಟ್ಟ ಆಸೆಗಳಿಗೆ ಟೋಪಿ ಬೀಳಬೇಡಿ. ಕಾಂಗ್ರೆಸ್ ನಿಮಗೆ ಬಹಳ ಕಾಲದಿಂದ ಟೋಪಿ ಹಾಕುತ್ತಲೇ ಬಂದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಕರ್ನಾಟಕ ಬಗ್ಗೆ ಕಾಳಜಿ ಇದ್ದರೆ ನ್ಯಾ.ಆನಂದ್ ಸಮಿತಿ ವರದಿಯ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಿ ಎಂದು ಲಹರ್ ಸಿಂಗ್ ಆಗ್ರಹಿಸಿದರು.
*40,000 ಪುಟಗಳ ದಾಖಲೆಗಳಿಗೆ ಉಲ್ಲೇಖಿಸಿ ಸರ್ಕಾರದ ವಿರುದ್ಧ ಆಕ್ರೋಶ.
* ವಿಧಾನಮಂಡಲದ ಇದೇ ಅಧಿವೇಶನದಲ್ಲಿ ನ್ಯಾ.ಎನ್. ಆನಂದ್ ಆಯೋಗದ ವರದಿಯನ್ನು ಮಂಡಿಸಬೇಕು.
* ಅಧಿಕಾರದಲ್ಲಿದ್ದವರು ಮತ್ತು ಪ್ರಭಾವಿಗಳು ವಕ್ಫ್ ಭೂಮಿ ದುರುಪಯೋಗಪಡಿಸಿಕೊಂಡಿದ್ದಾರೆ.
* ಅಲ್ಪಸಂಖ್ಯಾತ ಸಮುದಾಯ ಯಾರನ್ನು ತಮ್ಮ ರಕ್ಷಕರು ಎಂದು ನಂಬಿದ್ದಾರೋ ಅವರಿಂದಲೇ ದೊಡ್ಡ ವಂಚನೆಯಾಗಿದೆ.
* ನನಗೆ ದೊರೆತ ದಾಖಲೆಗಳನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ವಕ್ಫ್ ಕಾನೂನು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದೇನೆ.
*ವಕ್ಫ್ ಆಸ್ತಿಗಳ ಅತಿಕ್ರಮಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ವಿಚಾರಣಾ ಆಯೋಗವನ್ನು ರಾತ್ರೋರಾತ್ರಿ ವಿಸರ್ಜನೆ ಮಾಡಿದ್ದು ಏಕೆ?
ಕಾಂಗ್ರೆಸ್ ಸರ್ಕಾರ ವಕ್‌ಫ್ ಆಸ್ತಿ ಲೂಟಿಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಸಮುದಾಯದ ಒಳಗೆ ಮತ್ತು ಹೊರಗೆ, ತನ್ನದೇ ಪಕ್ಷದೊಳಗಿನ ಶ್ರೀಮಂತರು ಮತ್ತು ಪ್ರಭಾವಶಾಲಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಏಕೆ ಆಸಕ್ತಿ ಹೊಂದಿಲ್ಲ? ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ನ್ಯಾ.ಆನಂದ್ ವರದಿಯನ್ನು ಮಂಡಿಸಬೇಕು.
-ಲಹರ್ ಸಿಂಗ್ ಸಿರೋಯ, ರಾಜ್ಯಸಭೆ ಸದಸ್ಯ.