ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಭಾರತೀಯ ದಂಡಸಂಹಿತೆ (ಐಪಿಸಿ) ಸೆಕ್ಷನ್ 498ಎ ಕಾಯ್ದೆ ದುರುಪಯೋಗ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಪೀಠ, ಇದನ್ನು ತಡೆಯಬೇಕು ಎಂದು ಹೇಳಿದೆ.
ಸುಖಾಸುಮ್ಮನೆ ಪತಿಯ ಕುಟುಂಬದವರ ಮೇಲೆ ಆರೋಪ ಹೊರಿಸಿದ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು, ಪತಿ ಹಾಗೂ ಆತನ ಕುಟುಂಬದವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ತುಮಕೂರಿನ ಸಿ.ಬಿ. ಪ್ರಕಾಶ್ ಹಾಗೂ ಅವರ ಪತ್ನಿ ಎಸ್.ಬಿ. ತ್ರಿವೇಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.
ವಾದ- ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಅರ್ಜಿದಾರರು ಪತಿಯ ತಂದೆ- ತಾಯಿಯಾಗಿದ್ದು, ಅವರ ವಿರುದ್ಧ ಐಪಿಸಿ 498ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರಡಿ ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ, ಅವರ ವಿರುದ್ಧ ಯಾವುದೇ ಆರೋಪಗಳಿಗೆ ಸಾಕ್ಷಾೃಧಾರಗಳು ಲಭ್ಯವಿಲ್ಲ. ಪತ್ನಿ ಅತ್ತೆ ಮಾವನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಲರಾಗಿದ್ದಾರೆ. ಹಾಗಾಗಿ ಅವರ ವಿರುದ್ಧದ ಪ್ರಕರಣ ಮುಂದುವರಿಸಿದರೆ ಕಾನೂನು ದುರ್ಬಳಕೆ ಮಾಡಿದಂತಾಗುತ್ತದೆ ಎಂದಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರ ಪುತ್ರ ಚಿದಾನಂದ ಮತ್ತು ಬೆಂಗಳೂರಿನ ಯಲಹಂಕದ ಮಹಿಳೆ ಡಿ.ಎಸ್. ಮೇಘನಾ 2021ರ ಅ. 24ರಂದು ಮದುವೆಯಾದರು. ಮದುವೆಯಾದ ಎರಡು ತಿಂಗಳಿಗೆ ಪತಿ ಕೆಲಸದ ಸಲುವಾಗಿ ಜರ್ಮನಿಗೆ ತೆರಳಿದರು. ವೀಸಾ ಸಂಬಂಧ ಪತಿ- ಪತ್ನಿ ನಡುವೆ ಮನಸ್ತಾಪ ಉಂಟಾಗಿತ್ತು. ಇದಾದ ಮೇಲೆ ಆಕೆ 2022ರ ಮೇ 10ರಂದು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತಿ ಹಾಗೂ ಅತ್ತೆ- ಮಾವನ ವಿರುದ್ಧ ತುಮಕೂರು ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಪತಿಯ ವಿರುದ್ಧದ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಎರಡನೇ ಹಾಗೂ ಮೂರನೇ ಆರೋಪಿಯಾಗಿದ್ದ ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.