ನ್ಯೂಸ್

ಸೆಬಿ ಹೆಸರು, ಲೋಗೋ ದುರ್ಬಳಕೆ

ಸುದೀಪ್​ ವಿ.ಎನ್​

ನವದೆಹಲಿ: ತನ್ನ ಲೋಗೋ, ಲೆಟರ್​ಹೆಡ್, ಅಧಿಕಾರಿಗಳ ಹೆಸರು ಬಳಸಿ ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಕಲಿ ಸಂದೇಶಗಳನ್ನು ಹರಿಬಿಡುತ್ತಿದ್ದು, ಇದರ ಬಗ್ಗೆ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ. ಇಂತಹ ಸಂದೇಶಗಳನ್ನು ನಂಬಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ, ಹಣ ನೀಡುವ ಕ್ರಮಕ್ಕೆ ಮುಂದಾಗಬಾರದು ಎಂದು ಸಾರ್ವಜನಿಕರಿಗೆ ಸೆಬಿ ಎಚ್ಚರಿಸಿದೆ.

ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ಸೆಬಿಯ ಲೆಟರ್​ಹೆಡ್, ಲೋಗೋ, ಸೀಲ್ ಬಳಸಿ ತಾನು ಸೆಬಿ ಅಧಿಕಾರಿಯೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಲ್ಲದೆ, ಕೆಲವರಿಗೆ ವೈಯಕ್ತಿಕ ಸಂದೇಶ ಕಳಿಸಿ, ದಂಡ ಪಾವತಿಸದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆದರಿಸಿದ ಹಿನ್ನೆಲೆಯಲ್ಲಿ ಸೆಬಿ ಈ ಮುನ್ನೆಚ್ಚರಿಕೆ ನೀಡಿದೆ.

‘ಸೆಬಿಯ ಹೆಸರು ಹೇಳಿಕೊಂಡು ಹೀಗೆ ಮಾಹಿತಿ ಕೇಳುವ, ದಂಡದ ಹಣ ಕಳಿಸುವಂತೆ ಬೆದರಿಸುವವರ ಬಗ್ಗೆ ಜನರು ಹುಷಾರಾಗಿರಬೇಕು. ಈ ರೀತಿಯ ಸಂದೇಶ ಬಂದರೆ ಮೊದಲು ಅದು ನಕಲಿಯೋ, ಅಸಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೆಬಿಯ ಅಧಿಕೃತ ವೆಬ್​ಸೈಟ್ ಹೋಗಿ ಪರಿಶೀಲನೆ ಮಾಡಿಕೊಳ್ಳಬೇಕು. ಸೆಬಿಯ ಪ್ರತಿಯೊಂದು ಆದೇಶಕ್ಕೂ ಒಂದು ವಿಶಿಷ್ಟ ರೆಫರೆನ್ಸ್ ನಂಬರ್, ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ ಇರುತ್ತವೆ. ಅವೆಲ್ಲವನ್ನೂ ಸೆಬಿಯ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿರುತ್ತದೆ. ಅದಲ್ಲದೆ ಸೆಬಿ ದಾಖಲೆ ಪರಿಶೀಲನೆ ವ್ಯವಸ್ಥೆಯೂ ಅಸ್ತಿತ್ವದಲ್ಲಿದೆ. ಅದನ್ನು ಜನರು ಬಳಸಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.