ನ್ಯೂಸ್

ಬುಲೆಟ್​ ಮಿಸ್ಸಿಂಗ್​ ಪ್ರಕರಣಕ್ಕೆ ಟ್ವಿಸ್ಟ್​: ಆತ್ಮಹತ್ಯೆ ಮಾಡಿಕೊಂಡಿದ್ದ 'ಕಳ್ಳ' ಜೀವಂತ ಸಿಕ್ಕ!

ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್​ ಠಾಣೆಯಲ್ಲಿ ಈಚೆಗೆ 50 ಸಜೀವ ಗುಂಡುಗಳು ನಾಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣ ಬೇಧಿಸಲಾಗದೇ ಪೊಲೀಸರು ಪೇಚಿಗೆ ಸಿಲುಕಿದ್ದರು.

ಸಾಕಷ್ಟು ತನಿಖೆಯ ನಂತರ ಕೊನೆಗೆ ಬುಲೆಟ್​ ಕಪಿನಾ ನದಿಯಲ್ಲಿ ಪತ್ತೆಯಾಗಿದೆ! ಬುಲೆಟ್​ ಕದ್ದ ಆರೋಪಿ ಠಾಣೆಯ ನೌಕರ ಕೃಷ್ಣೇಗೌಡ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಬುಲೆಟ್​ ಕಳುವು ಪ್ರಕರಣ ಇನ್ನಷ್ಟು ಜಟಿಲವಾಗಿತ್ತು. ಆದರೆ ನಿಜವಾಗಿ ನಡೆದದ್ದೇ ಬೇರೆ!

ಅಷ್ಟಕ್ಕೂ ಆಗಿದ್ದೇನೆಂದರೆ, ಕಳೆದ ವಾರವಷ್ಟೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್‌ಗಳು ಠಾಣಾ ದಾಸ್ತಾನು ಕೊಠಡಿಯಿಂದ ನಾಪತ್ತೆಯಾಗಿತ್ತು. ಸಿಬ್ಬಂದಿ ಕೃಷ್ಣೇಗೌಡ ಹಾಗೂ ಇನ್ನೊಬ್ಬನ ಮೇಲೆ ಅನುಮಾನಗೊಂಡಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಕೂಡ ಮಾಡಲಾಗಿತ್ತು.

ತನ್ನ ಮೇಲೆ ವಿನಾಕಾರಣ ಆರೋಪ ಹೊರಿಸಿ ಅಮಾನತು ಮಾಡಲಾಗಿರುವ ಕಾರಣ, ತಾನು ಮನನೊಂದುಕೊಂಡಿರುವುದಾಗಿ ಹೇಳಿದ್ದ ಕೃಷ್ಣೇಗೌಡ, ದ್ವಿಚಕ್ರವಾಹನದಲ್ಲಿ ಸಮೀಪದ ಮನ್ನೇಹುಂಡಿ ಗ್ರಾಮದ ನದಿ ದಂಡೆಗೆ ತೆರಳಿ ವಸ್ತ್ರಗಳನ್ನು ಕಳಚಿ ಸ್ಕೂಟರ್ ಮೇಲೆ ಇಟ್ಟು ಕಾಣೆಯಾಗಿದ್ದಾನೆ. ಅದನ್ನು ನೋಡಿದವರು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಅಂದುಕೊಂಡಿದ್ದಾರೆ.

ನಂತರ ತನಿಖೆ ನಡೆಸಿದಾಗ ಆತನ ಮೃತದೇಹ ನದಿಯಲ್ಲಿ ಸಿಕ್ಕಿರಲಿಲ್ಲ. ಬದಲಿಗೆ ಆತ ನದಿ ಸಮೀಪ ಬಂದದ್ದು, ನಂತರ ಅಲ್ಲಿಂದ ಕಾಲ್ನಡಿಗೆಯಲ್ಲಿ ಬೇರೆಡೆ ಹೋಗಿರುವ ಬಗ್ಗೆ ಕೆಲ ಸ್ಥಳೀಯರು ಹೇಳಿದಾಗ ಆತನ ಮೇಲೆ ಇನ್ನಷ್ಟು ಸಂದೇಹ ಉಂಟಾಗಿದೆ.

ಸ್ಥಳೀಯರು ಹೇಳಿದ ಮಾಹಿತಿ ಆಧರಿಸಿ ಪೊಲೀಸರು ಹೋದಾಗ, ಹುಣಸೂರಿನ ಹುಲ್ಲಿನ ಮೆದೆಯಲ್ಲಿ ಅರೆಬೆತ್ತಲಾಗಿ ಅವಿತು ಕುಳಿತಿದ್ದ ಕೃಷ್ಣೇಗೌಡ ಪೊಲೀಸರನ್ನು ಕಂಡು ಕಣ್​ಕಣ್​ ಬಿಟ್ಟಿದ್ದಾನೆ.

ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಾನೇ ಬುಲೆಟ್​ ಕದ್ದಿರುವುದನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಮೇಲೆ ಸಂದೇಹ ಬರಬಾರದು ಎಂದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾಗಿಯೂ ಹೇಳಿದ್ದಾನೆ. ನಂತರ ಬುಲೆಟ್​ ಕದ್ದ ತನಿಖೆ ತೀವ್ರಗೊಳ್ಳುತ್ತಿರುವುದಕ್ಕೆ ಹೆದರಿ ಅದನ್ನು ನಂಜನಗೂಡು ಕಪಿಲಾ ನದಿಯಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಆ ಗುಂಡು ಕದ್ದದ್ದೇಕೆ? ಅದರಿಂದ ಏನು ಮಾಡಲು ಹೊರಟಿದ್ದ ಇತ್ಯಾದಿಯ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ.