ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  
ನ್ಯೂಸ್

ರಾಘವೇಂದ್ರ ಅವರಿಂದ ಜನರ ದಿಕ್ಕುತಪ್ಪಿಸುವ ಕೆಲಸ

ನವೀನ ಬಿ.ಎಂ

ಶಿವಮೊಗ್ಗ: ವಿಐಎಸ್‌ಎಲ್ ಕಾರ್ಖಾನೆಯನ್ನು ಮುಂದುವರೆಸುತ್ತೇವೆಂದು ನಂಬಿದ ಭದ್ರಾವತಿ ಜನರಿಗೆ ಸುಳ್ಳು ಹೇಳಿ ದಿಕ್ಕುತಪ್ಪಿಸುವ ಕೆಲಸವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಬಿಆರ್‌ಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ರಿಂದ 20 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಈ ಕಾರ್ಖಾನೆ ಪುನಶ್ಚೇತನ ಆಗಬೇಕೆಂಬ ಆಸೆಯಲ್ಲಿದ್ದ ಜನರಿಗೆ ಹಸಿ ಸುಳ್ಳು ಹೇಳಿ ಮತ ಪಡೆದಿದ್ದಾರೆ ಎಂದು ದೂರಿದರು.
ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭದ್ರಾವತಿಗೆ ಕರೆಯಿಸಿ ಇನ್ನೇನು ಕಾರ್ಖಾನೆ ಆರಂಭಿಸುತ್ತಾರೆಂದು ಆಸೆ ಹುಟ್ಟಿಸಿದ್ದರು. ಕುಮಾರಸ್ವಾಮಿ ಅವರು ಬಂದು ಹೋಗಿ ಒಂದು ತಿಂಗಳ ನಂತರ ವಿಐಎಸ್‌ಎಲ್ ಮುಚ್ಚುವ ಸ್ಥಿತಿಗೆ ಬಂದಿದೆ. ಯಾವುದೇ ಸಾರ್ವಜನಿಕ ವಲಯವನ್ನು ಪುನಶ್ಚೇತನಗೊಳಿಸಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಸಚಿವರು ಉತ್ತರ ಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಕೆಲ ಸದಸ್ಯರು ಈ ಕುರಿತು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕಾರ್ಖಾನೆಯ ಬಂಡವಾಳ ಹಿಂಪಡೆಯುವಂತೆ ನಿರ್ಣಯ ಆಗಿದೆ. ಈ ವಿಷಯವನ್ನು ಇಲ್ಲಿನ ಸಂಸದರು ಮುಚ್ಚಿಟ್ಟು ಜಿಲ್ಲೆಯ ಜನತೆಗೆ ದ್ರೋಹ ಎಸಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ನಾಗರಾಜ ಗೌಡ, ಎಂ ರಮೇಶ್ ಶೆಟ್ಟಿ ಶಂಕರಘಟ್ಟ, ಜಿ.ಡಿ.ಮಂಜುನಾಥ್ ಮತ್ತಿತರರಿದ್ದರು.