ನ್ಯೂಸ್

ದಾರಿ ತಪ್ಪಿಸುತ್ತಿರುವ ಮಾರ್ಗದರ್ಶಕ ಮ್ಯಾಪ್​ಗಳು!

ಸುದೀಪ್​ ವಿ.ಎನ್​

ದಾರಿ ತೋರಿಸಬೇಕಾದ ನ್ಯಾವಿಗೇಷನ್ ಆಪ್​ಗಳೇ ದಾರಿ ತಪ್ಪಿಸಿದರೆ... ಹೌದು ಇಂಥದ್ದೊಂದು ಜಿಜ್ಞಾಸೆ ಹುಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಕಳವಳಕ್ಕೂ ಕಾರಣವಾಗಿದೆ. ಅಪೂರ್ಣಗೊಂಡ ಸೇತುವೆಗಳು, ಅಪಾಯಕಾರಿ ಪ್ರದೇಶಗಳ ಬಗ್ಗೆ ಯಾವುದೇ ಸೂಚನೆ ನೀಡದೆ ಈ ನಕ್ಷೆಗಳು ವಾಹನ ಚಾಲಕರ ದಿಕ್ಕು ತಪ್ಪಿಸುತ್ತಿವೆ. ಸಾಮಾನ್ಯ ಜನರು ಬಿಡಿ, ಪೊಲೀಸರೂ ಗೂಗಲ್ ಮ್ಯಾಪ್ ನಂಬಿ ಚಳ್ಳೆಹಣ್ಣು ತಿಂದ ನಿದರ್ಶನಗಳಿವೆ. ಅದರಲ್ಲೂ, ದೂರದ ಪ್ರದೇಶಗಳಿಗೆ/ಊರುಗಳಿಗೆ ತೆರಳುವಾಗ ಹೀಗೆ ದಾರಿಯೇ ಬದಲಾಗಿಬಿಟ್ಟರೆ ಗೊತ್ತಿಲ್ಲದ ಭೌಗೋಳಿಕ ಪ್ರದೇಶದಲ್ಲಿ ಪ್ರಯಾಣಿಕರು ಪರದಾಡಬೇಕಾಗುತ್ತದೆ. ರಸ್ತೆ ಬಂದ್ ಆಗಿದ್ದರೂ ಕೆಲವೊಮ್ಮೆ ಆ ಮಾಹಿತಿ ಆಪ್​ನಲ್ಲಿ ಅಪ್​ಡೇಟ್ ಆಗಿರುವುದಿಲ್ಲ. ಹೀಗಾಗಿ, ಈ ನಕ್ಷೆಯನ್ನೇ ನಂಬಿದ ಚಾಲಕರು ರಸ್ತೆ ಬಂದ್ ಆಗಿರುವುದನ್ನು ಅರಿತಿರುವಷ್ಟರಲ್ಲಿ ಸಾಕಷ್ಟು ದೂರ ಕ್ರಮಿಸಿ ಬಂದಿರುತ್ತಾರೆ. ಮತ್ತೆ ವಾಪಸ್ ಹೋಗಿ, ಪರ್ಯಾಯ ದಾರಿ ಕಂಡುಕೊಳ್ಳುವ ಅನಿವಾರ್ಯತೆ. ಇಲ್ಲಿ ಸಮಯ, ಇಂಧನ, ಶ್ರಮ ಎಲ್ಲವೂ ವ್ಯರ್ಥ.

ಇತ್ತೀಚಿನ ಅವಘಡಗಳು

ಪೊಲೀಸರನ್ನೇ ಬಂಧಿಸಿದ ಜನರು!

ಗೂಗಲ್ ಮ್ಯಾಪ್ ತೋರಿದ ಮಾರ್ಗ ಅನುಸರಿಸಿ ಹೋದ ಅಸ್ಸಾಂ ಪೊಲೀಸರು ಫಜೀತಿಪಟ್ಟ ಘಟನೆ 2025ರ ಜನವರಿಯಲ್ಲಿ ಸಂಭವಿಸಿತು. ಮೋಸ್ಟ್ ವಾಂಟೆಡ್ ಆರೋಪಿಯೊಬ್ಬನನ್ನು ಹಿಡಿಯಲು ಅಸ್ಸಾಂನ ಜೋರ್ಹತ್ ಜಿಲ್ಲಾ ಪೊಲೀಸರ 16 ಸದಸ್ಯರ ತಂಡ ತಾವು ಹೋಗಬೇಕಿದ್ದ ಅಸ್ಸಾಂನ ಸ್ಥಳಕ್ಕೆ ಗೂಗಲ್ ಮ್ಯಾಪ್ ಬಳಸಿ ಹೊರಟಿತ್ತು. ಕೊನೆಗೆ ಚಹಾ ಎಸ್ಟೇಟ್ ಒಂದಕ್ಕೆ ಪೊಲೀಸರ ವ್ಯಾನ್ ಹೋಗಿ ನಿಂತಿದೆ. ಆದರೆ, ಅದು ವಾಸ್ತವವಾಗಿ ನಾಗಾಲ್ಯಾಂಡ್​ಗೆ ಸೇರಿದ ಪ್ರದೇಶವಾಗಿತ್ತು! ಸುದ್ದಿ ತಿಳಿದು ಪೊಲೀಸರ ಬಳಿ ಬಂದ ಸ್ಥಳೀಯರು, ಅವರನ್ನೇ ಅಪರಾಧಿಗಳೆಂದು ತಿಳಿದು, ಬಂಧಿಸಿ ಒಂದು ಇಡೀ ರಾತ್ರಿ ತೊಂದರೆ ನೀಡಿದ್ದರು. ಹಲ್ಲೆಯನ್ನೂ ನಡೆಸಿದ್ದರು. ಇಬ್ಬರು ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿದ್ದು, ಉಳಿದವರು ನಾಗರಿಕ ದಿರಿಸಿನಲ್ಲಿದ್ದರು. ಪರಿಸ್ಥಿತಿ ಬಿಗಡಾಯಿಸಿ ದ್ದರಿಂದ ಕೊನೆಗೆ ಜೋರ್ಹತ್ ಎಸ್​ಪಿ, ನಾಗಾಲ್ಯಾಂಡ್​ನ ಮೋಕೊಕ್​ಚುಂಗ್ ಎಸ್​ಪಿಗೆ ಕರೆ ಮಾಡಿ ವಿಷಯ ತಿಳಿಸಿದರು. ನಂತರ ನಾಗಾಲ್ಯಾಂಡ್ ಪೊಲೀಸರ ನೆರವಿನಿಂದ ಅಸ್ಸಾಂ ಪೊಲೀಸರು ಬಂಧಮುಕ್ತಗೊಂಡು ಮನೆ ಸೇರಿದರು!

ಕಂದಕಕ್ಕೆ ಬಿದ್ದ ಕಾರು

ಗೂಗಲ್ ಮ್ಯಾಪ್ ಮಾಹಿತಿ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರ ಕಾರು ಕಂದಕಕ್ಕೆ ಬಿದ್ದ ಘಟನೆ ನವಿ ಮುಂಬೈಯಲ್ಲಿ 2025ರ ಜುಲೈ 26ರಂದು ಸಂಭವಿಸಿತು. ಅದೃಷ್ಟವಶಾತ್, ಮಹಿಳೆ ಪ್ರಾಣಾಪಾಯದಿಂದ ಪಾರಾದರು. ಬೇಲಾಪುರದ ಸೇತುವೆ ಮೂಲಕ ಉಲ್ವೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಏಕಾಏಕಿ ತಿರುವು ತೆಗೆದುಕೊಂಡ ಕಾರಣ ಅಪಘಾತ ಸಂಭವಿಸಿತು. ಮಹಿಳೆಯರನ್ನು ರಕ್ಷಿಸಿ,

ಕ್ರೇನ್​ನಿಂದ ಕಾರನ್ನು ಮೇಲಕ್ಕೆ ಎತ್ತಲಾಯಿತು.

ಯುವವೈದ್ಯರ ಬದುಕು ಕಸಿಯಿತು ಕೇರಳದ ಕೊಚ್ಚಿಯ ಗೋತುರುತ್ತ್ ಬಳಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ ಪರಿಣಾಮ ಕಾರು ನದಿಗೆ ಬಿದ್ದು, ಇಬ್ಬರು ಯುವವೈದ್ಯರು ಮೃತಪಟ್ಟ ಘಟನೆ 2023ರ ಅಕ್ಟೋಬರ್ 1ರಂದು ನಡೆದಿತ್ತು. ಎಂಬಿಬಿಎಸ್ ವಿದ್ಯಾರ್ಥಿ ಸೇರಿದಂತೆ ಇತರ ಮೂವರನ್ನು ರಕ್ಷಿಸಲಾಯಿತು.

ಅಪೂರ್ಣ ಸೇತುವೆಗೆ...

ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಉತ್ತರಪ್ರದೇಶದ ಬದೌನ್​ನಲ್ಲಿ 2024ರ ನವೆಂಬರ್ 26ರಂದು ನಡೆಯಿತು. ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ರಾಯ್ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಬರೇಲಿ ಸಮೀಪದ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ವಿುಸಿದ್ದ ಸೇತುವೆಯನ್ನು ಬಳಸಿದ್ದರು. ಆದರೆ, ಆ ಸೇತುವೆ ಅಪೂರ್ಣವಾಗಿತ್ತು. ಇದರಿಂದ ಕಾರು ನದಿಗೆ ಬಿದ್ದ ಪರಿಣಾಮವಾಗಿ, ಮೂವರೂ ಯುವಕರು ಸ್ಥಳದಲ್ಲೇ ಪ್ರಾಣಬಿಟ್ಟರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗೂಗಲ್ ಮ್ಯಾಪ್ಸ್ ಇಂಡಿಯಾ ಹಾಗೂ ಉತ್ತರಪ್ರದೇಶದ ಲೋಕೋಪಯೋಗಿ ಇಲಾಖೆಯ ನಾಲ್ವರು ಇಂಜಿನಿಯರ್​ಗಳ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಗೂಗಲ್ ಮ್ಯಾಪ್ ವಕ್ತಾರರು ಯುವಕರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದರು. ಗೂಗಲ್ ಮ್ಯಾಪ್ ನ್ಯಾವಿಗೇಷನ್ ಅಪ್​ಡೇಟ್ ಆಗದೇ ಇರುವುದು ದುರಂತಕ್ಕೆ ಪ್ರಮುಖ ಕಾರಣ.

ಅಪಘಾತಕ್ಕೆ ಕಾರಣಗಳು

್ಝಕಡಿಮೆ ಟ್ರಾಫಿಕ್ ಇರುವ ರಸ್ತೆಯನ್ನು ಗೂಗಲ್ ಮ್ಯಾಪ್ ತೋರಿಸಬಹುದು. ಆದರೆ, ಅವುಗಳ ಸುರಕ್ಷತೆ ಬಗ್ಗೆ ಯಾವುದೇ ಖಚಿತತೆ ಇರುವುದಿಲ್ಲ. ಅದರಲ್ಲೂ, ಮಳೆಗಾಲದ ಸಮಯದಲ್ಲಿ ತೊರೆಗಳು ತುಂಬಿ ಹರಿಯುವ, ಭೂಕುಸಿತ ಉಂಟಾಗಿರುವ, ಮರಗಳು ಬಿದ್ದಿರುವ, ಕಡಿದಾದ ಹಾಗೂ ಅಪಾಯಕಾರಿ ರಸ್ತೆಗಳನ್ನು ಬಳಸಲು ಗೂಗಲ್ ಮ್ಯಾಪ್ ತೋರಿಸಬಹುದು. ಇದರಿಂದ ಅಪಘಾತಗಳ ಸಾಧ್ಯತೆ ಹೆಚ್ಚು.

್ಝಗೂಗಲ್ ಮ್ಯಾಪ್​ನಂತಹ ನ್ಯಾವಿಗೇಷನ್ ಆಪ್​ಗಳನ್ನು ಬಳಸುವಾಗ ಚಾಲಕರು ತಮ್ಮ ಮೊಬೈಲ್ ಫೋನ್ ಸ್ಕ್ರೀನ್​ನ್ನು ಆಗಾಗ್ಗೆ ನೋಡುವುದರಿಂದ ರಸ್ತೆಯ ಮೇಲಿನ ಗಮನ ಕಡಿಮೆಯಾಗುತ್ತದೆ. ಬೆಂಗಳೂರಿನಲ್ಲಿ 2025ರ ಫೆಬ್ರವರಿಯಲ್ಲಿ ನಡೆದ ಒಂದು ಅಪಘಾತದಲ್ಲಿ, ಚಾಲಕ ಗೂಗಲ್ ಮ್ಯಾಪ್​ನಲ್ಲಿ ದಾರಿ ನೋಡುತ್ತಿದ್ದಾಗ ರಸ್ತೆ ಬದಿಯ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವೈದ್ಯರೊಬ್ಬರು ಪ್ರಾಣ ಕಳೆದುಕೊಂಡರು. ಚಾಲಕನ ಗಮನವು ಡ್ರೖೆವಿಂಗ್​ಗಿಂತ ಮ್ಯಾಪ್​ನ ಮೇಲೆ ಹೆಚ್ಚಿತ್ತೆಂದು ತನಿಖೆ ವೇಳೆ ತಿಳಿದುಬಂತು.