ಹೊನ್ನಾವರ: ಗರ್ಭಿಣಿ ಹಸುವಿನ ತಲೆ, ಕಾಲು ಕಡಿದು, ಹೊಟ್ಟೆ ಸೀಳಿ ಕರುವನ್ನೂ ಹತ್ಯೆ ಮಾಡಿದ ಘೊರ ಘಟನೆ ಸಾಲ್ಕೋಡ ಗ್ರಾಪಂ ವ್ಯಾಪ್ತಿಯ ಕೊಂಡಾಕುಳಿಯಲ್ಲಿ ನಡೆದಿದೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರು ಶನಿವಾರ ಹಸುವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಹಸು ಹತ್ಯೆ ಮಾಡಿರುವ ಕುರುಹು ಪತ್ತೆಯಾಗಿದೆ. ಇದನ್ನು ನೋಡಿದ ಮಾಲೀಕರು ಹಾಗೂ ಊರ ಜನ ದುಃಖಿತರಾಗಿದ್ದಾರೆ. ಹಸು ಮೇಲೆ ಕ್ರೌರ್ಯ ಮೆರೆದಿರುವ ರಕ್ಕಸರನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೃಷ್ಣ ಆಚಾರಿ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲು ಕತ್ತರಿಸಿದವರಿನ್ನೂ ಸೇಫ್!: ಬೆಂಗಳೂರಿನಲ್ಲಿ ಆಕಳುಗಳ ಕೆಚ್ಚಲು ಕತ್ತರಿಸಿದ ಪ್ರಕರಣ ರಾಜ್ಯಾದ್ಯಂತ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದರೆ, ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಆಕಳುಗಳ ಕಾಲಿನ ನರ ಕಟ್ ಮಾಡಿದ ಪ್ರಕರಣ ನಡೆದು ಒಂದೂವರೆ ತಿಂಗಳಾದರೂ ಆರೋಪಿಯನ್ನು ಬಂಧಿಸದಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಕಸಾಯಿಖಾನೆಗೆ ಆಕಳನ್ನು ಮಾರಾಟ ಮಾಡುತ್ತಿಲ್ಲವೆಂಬ ಕಾರಣಕ್ಕೆ ಡಿ. 1ರಂದು ಹಲಗೇರಿ ಗ್ರಾಮದ 4 ಆಕಳುಗಳ ಕಾಲಿನ ನರ ಕಟ್ ಮಾಡಿದ ಪ್ರಕರಣ ನಡೆದಿತ್ತು. ಎದ್ದು ನಿಲ್ಲಲಾಗದ ಆ ಆಕಳುಗಳು ಕಸಾಯಿಖಾನೆಯನ್ನೇ ಸೇರಿವೆ ಎಂದು ಹೇಳಬೇಕಿಲ್ಲ.