ನ್ಯೂಸ್

ಗಂಡ ಕೊಟ್ಟ, ಹೆಂಡತಿ ಕೊಡಲಿಲ್ಲ; ಅಷ್ಟಕ್ಕೇ ಮಹಿಳೆಯ ತಲೆಗೆ ಗುಂಡಿಕ್ಕಿ ಕೊಂದೇ ಬಿಟ್ರು!

ಪಾಟ್ನಾ: ಇದು ಪತಿ-ಪತ್ನಿ ಇಬ್ಬರೂ ಜತೆಗಿದ್ದಾಗ ಎದುರಾದ ಸಂಕಟ. ಗಂಡ ಕೇಳಿದಾಕ್ಷಣ ಕೊಟ್ಟುಬಿಟ್ಟ, ಆದರೆ ಪತ್ನಿ ಕೊಡಲು ವಿರೋಧಿಸಿದಳು. ಅಷ್ಟಕ್ಕೇ ಸಿಟ್ಟಾದ ದುಷ್ಕರ್ಮಿಗಳು ಆ ಮಹಿಳೆಯ ತಲೆಗೆ ಗುಂಡಿಕ್ಕಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಾಯ್ಖಾ ಪರ್ವೀನ್​ ಹಾಗೂ ಇಮ್ರಾನ್ ಅಲಂ ದಂಪತಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಂಥದ್ದೊಂದು ಪ್ರಕರಣ ನಡೆದಿದೆ. ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿರುವ ಇಮ್ರಾನ್​ ಅಲಂ ತನ್ನೂರಿಗೆ ಪತ್ನಿಯೊಂದಿಗೆ ತೆರಳುತ್ತಿದ್ದಾಗ ಎದುರಾದ ಆಗಂತುಕರು ಈ ದುಷ್ಕೃತ್ಯ ಎಸಗಿದ್ದಾರೆ.

ಬಿಹಾರದ ಸಿವಾನ್​ನಲ್ಲಿ ಉದ್ಯೋಗದಲ್ಲಿರುವ ಅಲಂ, ತನ್ನೂರು ದೆಹ್ರಿ ಆನ್​ಸಾನ್​ಗೆ ತೆರಳುತ್ತಿದ್ದರು. ಅದಕ್ಕಾಗಿ ಪಾಟ್ನಾ ರೈಲ್ವೆ ನಿಲ್ದಾಣಕ್ಕೆ ಅವರು ಆಟೋದಲ್ಲಿ ಸಾಗುತ್ತಿದ್ದಾಗ ಚಿರೈಯಾತಾಧ್​ ಫ್ಲೈ ಓವರ್​ ಮೇಲೆ ಮತ್ತೊಂದು ಆಟೋದಲ್ಲಿ ಬಂದ ಆಗಂತುಕರು ಇವರಿದ್ದ ಆಟೋ ನಿಲ್ಲಿಸುವಂತೆ ಚಾಲಕನಿಗೆ ಸೂಚನೆ ನೀಡಿದ್ದರು.

ಆಟೋ ನಿಲ್ಲುತ್ತಿದ್ದಂತೆ ಎರಡು ಪ್ರತ್ಯೇಕ ಬೈಕ್​ಗಳಲ್ಲಿ ಬಂದ ಇಬ್ಬರು ಪರ್ವೀನ್ ಮತ್ತು ಇಮ್ರಾನ್ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಹೆದರಿಸಿದ್ದರು. ಬೆದರಿದ ಪತಿ ತನ್ನಲ್ಲಿದ್ದುದನ್ನು ತಕ್ಷಣ ಕೊಟ್ಟುಬಿಟ್ಟ. ಆದರೆ ಪತ್ನಿ ಪರ್ವೀನ್​ ಏನನ್ನೂ ಕೊಡಲು ನಿರಾಕರಿಸಿ, ವಿರೋಧ ವ್ಯಕ್ತಪಡಿಸಿದಾಗ ಸಿಟ್ಟಾದ ದುಷ್ಕರ್ಮಿಗಳು ಆಕೆಯ ತಲೆಗೆ ಶೂಟ್​ ಮಾಡಿದ್ದಾರೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಬಳಿ ಇದ್ದಿದ್ದನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಇಮ್ರಾನ್​ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್​)