ನ್ಯೂಸ್

ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯಲ್ಲಿ ಹಣ ದುರುಪಯೋಗ

ಪಿರಿಯಾಪಟ್ಟಣ: ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ 6.95 ಕೋಟಿ ರೂ. ದುರುಪಯೋಗವಾಗಿರುವ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ ತಂಬಾಕು ಮಂಡಳಿಯ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಧು, ಅಕೌಂಟೆಂಟ್ ರಾಜಶೇಖರ ರೆಡ್ಡಿ ಮತ್ತು ಹರಾಜು ಅಧೀಕ್ಷಕ ಐಸಾಕ್ ಸ್ವರ್ಣದತ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ತಂಬಾಕು ಮಂಡಳಿಯಲ್ಲಿ ನೊಂದಾಯಿತರಾಗಿರುವ ಅಧಿಕೃತ ತಂಬಾಕು ಬೆಳೆಗಾರರಿಗೆ ತಂಬಾಕು ಮಂಡಳಿಯು ಕೆನರಾ ಬ್ಯಾಂಕ್ ನಲ್ಲಿ ರೈತರ ಹೆಸರಿನಲ್ಲಿ ಸಾಲ ಪಡೆದು ಪ್ರತಿವರ್ಷ ಮುಂಗಡವಾಗಿ ಸಾಲದ ರೂಪದಲ್ಲಿ ನಿಗದಿತ ಪ್ರಮಾಣದ ರಸಗೊಬ್ಬರ ವಿತರಣೆ ಮಾಡುತ್ತಿದೆ. ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರು ತಂಬಾಕು ಮಾರಾಟ ಮಾಡಿದ ನಂತರ ತಂಬಾಕು ಮಂಡಳಿಯಲ್ಲಿರುವ ರೈತರ ಖಾತೆಯಿಂದ ಹಣ ಕಡಿತ ಮಾಡಿ ಕೆನರಾ ಬ್ಯಾಂಕಿಗೆ ಪಾವತಿಸಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂಬಾಕು ಮಂಡಳಿಯ ಅಧಿಕಾರಿಗಳು ಹಲವು ರೈತರ ಹಣವನ್ನು ಬ್ಯಾಂಕಿಗೆ ಮರು ಪಾವತಿಸದೆ ವಿವಿಧ ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಅವ್ಯವಹಾರ ನಡೆಸಿರುವ ಬಗ್ಗೆ ದೂರು ನೀಡಲಾಗಿದೆ.

ಕಳೆದ ಎರಡು ವರ್ಷಗಳಿಂದ ಈ ರೀತಿಯ ಅವ್ಯವಹಾರ ನಡೆದಿದ್ದರೂ ಪ್ರತಿವರ್ಷ ಲೆಕ್ಕ ಪರಿಶೋಧನೆಗೆ ಬರುವ ಆಡಿಟರ್‌ಗಳಿಗೆ ಭಾರಿ ಪ್ರಮಾಣದ ಅಕ್ರಮ ಪತ್ತೆಯಾಗದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.

ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಗೆ ಕೋಟ್ಯಂತರ ರೂ. ಮೊತ್ತದ ವಹಿವಾಟು ನಡೆಸಲು ಅನುಮತಿ ನೀಡಿದವರಾರು? ಎಂಬ ಪ್ರಶ್ನೆ ಮೂಡಿದ್ದು ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬ ಅಧಿಕಾರಿಯೂ ತನಿಖೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಂಬಾಕು ಬೆಳೆಗಾರರದಿಂದ ವಸೂಲಿ ಮಾಡಿದ್ದ ರಸಗೊಬ್ಬರ ಸಾಲದ ಹಣ ಬ್ಯಾಂಕಿಗೆ ಮರು ಪಾವತಿಸದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಕಳೆದ ಒಂದು ತಿಂಗಳ ಹಿಂದೆಯೇ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ತಂಬಾಕು ಮಂಡಳಿಯ ಬೆಂಗಳೂರಿನ ಹರಾಜು ನಿರ್ದೇಶಕರ ಕಚೇರಿಯಿಂದ ಲೆಕ್ಕ ಪರಿಶೋಧಕರು ಮತ್ತು ಅಧಿಕಾರಿಗಳು ಬಂದು ತಪಾಸಣೆ ನಡೆಸಿ ಹೋಗಿದ್ದರು. ಈ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ವಹಿವಾಟು ನಡೆದಿರುವುದನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು ಸತತವಾಗಿ 15 ದಿನಗಳವರೆಗೆ ಮಾಹಿತಿ ಸಂಗ್ರಹಿಸಿದ್ದರು. ಒಟ್ಟಾರೆ 6.95 ಕೋಟಿ ರೂ. ಹಣ ದುರುಪಯೋಗವಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಹರಾಜು ಮಾರುಕಟ್ಟೆ ಸಂಖ್ಯೆ 5ರ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.