ಜಿಡಿಎನ್ ಅವತಾರದಲ್ಲಿ ಮಾಧವನ್
- ಜಿಡಿ ನಾಯ್ಡು ಬಯೋಪಿಕ್ ನಲ್ಲಿ ನಟ ಆರ್ . ಮಾಧವನ್
- ಧುರಂಧರ್ ಬಳಿಕ ಮತ್ತೊಂದು ನೈಜ ಪಾತ್ರದಲ್ಲಿದ್ದಾರೆ ಬಹುಭಾಷಾ ನಟ
- ಜಿಡಿಎನ್ ಸಿನಿಮಾ ಟ್ರೇಲರ್ ರಿಲೀಸ್, ಇದೇ 17ಕ್ಕೆ ಸಿನಿಮಾ ತೆರೆಗೆ
ಪದ್ಮಶ್ರೀ ಪುರಸ್ಕೃತ ಬಹುಭಾಷಾ ನಟ ಆರ್. ಮಾಧವನ್ ಈಗಾಗಲೇ ಹಲವು ನೈಜ ಪಾತ್ರಗಳಲ್ಲಿ ಮಿಂಚಿದ್ದಾರೆ. ‘ರಾಕೆಟ್ರಿ’ಯ ನಂಬಿ ನಾರಾಯಣ್, ‘ಕೇಸರಿ ಚಾಪ್ಟರ್ 2’ದಲ್ಲಿ ಅಡ್ವೋಕೇಟ್ ನೆವಿಲಿ ಮ್ಯಾಕ್‌ಕಿನ್ಲೇ ಹಾಗೂ ‘ಧುರಂಧರ್’ ಸರಣಿಯ ಅಜಯ್ ಸನ್ಯಾಲ್. ಈ ಮೂರು ಪಾತ್ರಗಳಲ್ಲಿ ‘ಧುರಂಧರ್’ನ ಅಜಯ್ ಸನ್ಯಾಲ್ ಪಾತ್ರ ಪ್ರೇಕ್ಷಕರಿಗೆ ಅಚ್ಚೊತ್ತಿತ್ತು. ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೇ ಹೋಲುವ ಕಾಲ್ಪನಿಕ ಪಾತ್ರ ಇದಾಗಿದ್ದು, ಮಾಧವನ್ ಥೇಟ್ ಅವರಂತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಂತಹ ಬಹುಮುಖ ಪ್ರತಿಭೆ ಇದೀಗ ಮತ್ತೊಂದು ನೈಜ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಕೈಗಾರಿಕಾ ಕ್ರಾಂತಿ ಮಾಡಿ, ‘ಮಿರಾಕಲ್ ಮ್ಯಾನ್’ ಎಂದೇ ಹೆಸರುವಾಸಿಯಾಗಿದ್ದ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿ.ಡಿ.ನಾಯ್ಡು) ಬಯೋಪಿಕ್ ಮಾಧವನ್ ಅಭಿನಯಿಸಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಜಿಡಿಎನ್ ಅವತಾರದಲ್ಲಿ ಮಾಧವನ್ ಮಿಂಚಿದ್ದಾರೆ. ವಿದೇಶದಿಂದ ಸರಕುಗಳನ್ನು ಆಮದು ಮಾಡಿಕೊಂಡು ದೇಶದಲ್ಲಿ ಉದ್ಯಮ ಕಟ್ಟಿಕೊಳ್ಳುವ ಜತೆಗೆ ಬ್ರಿಟಿಷರಿಗೆ ಸೆಡ್ಡು ಹೊಡೆದ ಅಂಶಗಳ ಮೇಲೆ ಟ್ರೇಲರ್‌ನಲ್ಲಿ ಬೆಳಕು ಚೆಲ್ಲಲಾಗಿದೆ. ಥೇಟ್ ಜಿಡಿ ನಾಯ್ಡು ಅವರಂತೆಯೇ ಮಾಧವನ್ ಕಾಣಿಸಿಕೊಂಡಿದ್ದಾರೆ. ಅವರಿಗೆ ಪ್ರಿಯಾಮಣಿ ಜೋಡಿಯಾಗಿದ್ದಾರೆ. ಇದೇ ಜುಲೈ 17ಕ್ಕೆ ತೆರೆ ಮೇಲೆ ಬರಲಿದೆ. -ಏಜೆನ್ಸೀಸ್
ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದ ನಾಯ್ಡು
ತಮಿಳುನಾಡಿನ ಕೊಯಮತ್ತೂರು ಮೂಲದ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (1893-1974) ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಕೈಗಾರಿಕಾ ಸ್ಥಾಪನೆಗೆ ಭದ್ರ ಬುನಾದಿ ಹಾಕಿದವರಲ್ಲಿ ಓರ್ವರು. ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಮೋಟಾರ್ ಪರಿಚಯಿಸಿದ ಕೀರ್ತಿ ಅವರಿಗಿದೆ. ಕೈಗಾರಿಕೆ ಜತೆಗೆ ಎಲೆಕ್ಟ್ರಿಕಲ್, ಕೃಷಿ, ಆಟೋಮೊಬೈಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಜತೆಗೆ ಬ್ರಿಟಿಷರಿಗೆ ಸೆಡ್ಡು ಹೊಡೆದು ಉದ್ಯಮದಲ್ಲಿ ಸಾಧಿಸಿದ್ದರು. ಹಾಗಾಗಿ, ಅವರನ್ನು ‘ಮಿರಾಕಲ್ ಮ್ಯಾನ್’ ಎಂದು ಕರೆಯಲಾಗುತ್ತಿತ್ತು.