ನ್ಯೂಸ್

ಮಾತು ಕೇಳದ್ದಕ್ಕೆ ಬಾಲಕನನ್ನು ಸರಪಳಿಯಿಂದ ಕಟ್ಟಿ ಅಮಾನುಷವಾಗಿ ಥಳಿಸಿದ ಮದರಸ ಶಿಕ್ಷಕ

ಲಖನೌ: ತಮ್ಮ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಒಬ್ಬನನ್ನು ಮದರಸದಲ್ಲಿ ಕೂಡಿ ಹಾಕಿ ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರಪ್ರದೇಶದ ಸಹರಾನ್​ಪುರದಲ್ಲಿ ನಡೆದಿದೆ.

ಘಟನೆ ಸಂಬಂಧ ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮದರಾಸದ ಮುಖ್ಯಸ್ಥ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಾಲಕನ ತಂದೆ ಹಾಗೂ ತಾಯಿ ಕೂಲಿಕಾರ್ಮಿಕರಾಗಿದ್ದು, ತಮ್ಮ ಮಗನನ್ನು ಸಹರಾನ್​ಪುರದಲ್ಲಿರುವ ಮದರಸದಲ್ಲಿ ಬಿಟ್ಟಿದ್ದರು. ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿ ಊಟ ಕೊಡದೇ ಸರಪಳಿಯಲ್ಲಿ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ.

ಬಾಲಕ ಹೇಗೋ ತಪ್ಪಿಸಿಕೊಂಡು ಹತ್ತಿರದ ಬಲ್ಲು ಎಂಬ ಗ್ರಾಮಕ್ಕೆ ತೆರಳಿದ್ದಾನೆ. ಅಸ್ವಸ್ಥಗೊಂಡಿದ್ದ ಬಾಲಕನನ್ನು ಗ್ರಾಮಸ್ಥರು ಸಂತೈಸಿ ವಿಚಾರಿಸಿದಾಗ ಆತ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಕೂಡಲೇ ಆತನ ಪೋಷಕರು ಹಾಗೂ ಸ್ಥಳೀಯ ಪೊಲೀಸ್​ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಕೂಡಲೇ ತೆರಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳಿಕ ಮದರಸಗೆ ತೆರಳಿ ವಿಚಾರಣೆ ನಡೆಸಿದಾಗ ಆ ರೀತಿ ಏನು ನಡೆದಿಲ್ಲ. ಸುಮ್ಮನೆ ಆರೋಪ ಮಾಡಲಾಗುತ್ತಿದ್ದು, ಬಾಲಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಮದರಸಾದ ಮುಖ್ಯಸ್ಥನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಮಾತನ್ನು ಕೇಳಲಿಲ್ಲ ಎಂಬಬ ಕಾರಣಕ್ಕೆ ಈ ರಿತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದಿ, ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.