ಬೆಂಗಳೂರು: ರಂಜಾನ್ ಹಿನ್ನೆಲೆಯಲ್ಲಿ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಮುಸ್ಲಿಂ ಮುಖಂಡರಿಂದ ಒತ್ತಡ ಹೆಚ್ಚುತ್ತಿದ್ದಂತೆಯೇ, ಅವಕಾಶ ನೀಡಬೇಡಿ ಎನ್ನುವ ಸಚಿವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಅವಕಾಶ ಕೋರಿ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಗುರುವಾರ ಬೆಳಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅದನ್ನು ತೀವ್ರವಾಗಿ ವಿರೋಧಿಸಿದ್ದ ಸಚಿವ ಕೆ.ಎಸ್. ಈಶ್ವರಪ್ಪ, ‘ಕಾನೂನಿಗೆ ಎಲ್ಲರೂ ಸಮಾನರು. ಯಾವ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು’ ಎಂದು ಹೇಳಿದ್ದರು.
ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿ, ‘‘ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಇಬ್ರಾಹಿಂ ಈ ರೀತಿಯಲ್ಲಿ ಪತ್ರ ಬರೆಯುತ್ತಿರಲಿಲ್ಲ. ನಿಜಾಮುದ್ದಿನ್ ನಂಜಿನಿಂದ ಎರಡು ತಿಂಗಳು ತತ್ತರಿಸಿದ್ದೇವೆ. ಈ ಹಂತದಲ್ಲಿ ಮತ್ತೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರೆ ಸಮಸ್ಯೆಯಾಗುತ್ತದೆ’’ ಎಂದಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಕೂಡ ಸಾಮೂಹಿಕ ಪ್ರಾರ್ಥನೆಯ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘‘ರಾಮನವಮಿಯಲ್ಲಿ ಪಾನಕ ಹಂಚಲು ಅವಕಾಶ ನೀಡಲಿಲ್ಲ. ಇಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ. ಯಾವುದೇ ಕಾರಣಕ್ಕೂ ಮಸೀದಿ ಅಥವಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಬಾರದು’’ ಎಂದು ಖಂಡತುಂಡವಾಗಿ ಹೇಳಿದ್ದಾರೆ.
ಇಷ್ಟೆಲ್ಲ ಪರ-ವಿರೋಧ ಹೇಳಿಕೆಗಳ ನಂತರ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.