ಕೆ.ಆರ್.ಪೇಟೆ: ಸಮರ್ಪಕ ಮಾಹಿತಿಯೊಂದಿಗೆ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಬೇಕು. ಕರ್ತವ್ಯಲೋಪವೆಸಗುತ್ತ ಅಭಿವೃದ್ಧಿ ಕಾರ್ಯಗಳ ಪ್ರಗತಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಸಿದರು.
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ನೀರು ಪೂರೈಕೆ ಯೋಜನೆಯಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೂ ಫೋನ್ ರಿಸೀವ್ ಮಾಡುವುದಿಲ್ಲ. ಅನುದಾನವಿದ್ದರೂ ಕಾಮಗಾರಿ ಆರಂಭಿಸದೆ ಜನವಿರೋಧಿ ನೀತಿ ಅನುಸರಿಸುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವ ಕೆ.ಸಿ.ನಾರಾಯಣಗೌಡ ಸಮರ್ಪಕ ಮಾಹಿತಿ ನೀಡದ ಗ್ರಾಮಿಣ ನೀರು ಪೂರೈಕೆ ಯೋಜನೆಯ ಇಂಜಿನಿಯರ್ ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಶಿಕ್ಷಣ ಇಲಾಖೆಯ ಪ್ರಗತಿಯ ವಿವರಗಳನ್ನು ಆಲಿಸಿದ ಸಚಿವರು, ಗ್ರಾಮೀಣ ಪ್ರದೇಶದ ಕೆಲವು ಶಾಲೆಗಳಿಗೆ ಶಿಕ್ಷಕರು ನಿಗದಿತ ಸಮಯಕ್ಕೆ ಹೋಗುತ್ತಿಲ್ಲ. ಕೆಲವು ಕಡೆ ಶಿಕ್ಷಕರು ಶಾಲೆಗೆ ಹೋಗದೆ ಖಾಸಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಪಾಠಮಾಡಿಸುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಶಾಲೆಗೆ ಹೋಗದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಿ.ಆರ್.ಪಿಗಳು ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಚಲನವಲನಗಳನ್ನು ವರದಿ ಮಾಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಶಾಲೆಗಳ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಸೂಕ್ತ ಸಹಕಾರ ಸಿಗುತ್ತಿಲ್ಲ:
ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅರಣ್ಯ ಇಲಾಖೆ ವತಿಯಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಇದರಿಂದ ರಸ್ತೆಗಳ ಕಾಮಗಾರಿಗೆ ಅಡ್ಡಿಯಾಗಿದೆ ಎನ್ನುವ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರು ಸಭೆಯ ಮುಂದಿಟ್ಟರು. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಬದಿಯಲ್ಲಿ ಗಿಡನೆಟ್ಟವರು ಅರಣ್ಯ ಇಲಾಖೆಯವರು. ರಸ್ತೆ ವಿಸ್ತರಣೆಗೆ ಅವರು ಸಹಕರಿಸಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಅನುಮತಿಗಾಗಿ ಕಾಯದೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಕಾಮಗಾರಿಗಳನ್ನು ಮುಗಿಸುವಂತೆ ಸಚಿವರು ಸೂಚಿಸಿದರು. ಮಳೆಹಾನಿಯಿಂದ ಒಡೆದ ಕೆರೆ ಕಟ್ಟೆಗಳ ದುರಸ್ತಿ ಕ್ರಮದ ಬಗ್ಗೆ ನೀರಾವರಿ ಇಲಾಖೆಯಿಂದ ಕೆರೆಯ ನೀರು ಖಾಲಿಯಾಗದಂತೆ ತಾತ್ಕಾಲಿಕ ಬಂಡುಗಳನ್ನು ಹಾಕುವಂತೆ ಸೂಚಿಸಿದರು. ಕೆರೆ ನೀರು ಖಾಲಿಯಾದರೆ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರಲಿದ್ದು, ಅಧಿಕಾರಿಗಳು ಈಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರು.
ಸಣ್ಣ ನೀರಾವರಿ ಇಲಾಖೆಯ ಮೂಲಕ ಹೊಸಹೊಳಲು ಕೆರೆ ಅಭಿವೃದ್ಧಿಗೆ 10 ಕೋಟಿ ರೂ., ಕೆ.ಆರ್.ಪೇಟೆ ದೇವೀರಮ್ಮಣಿ ಕೆರೆ ಅಭಿವೃದ್ಧಿಗೆ 10 ಕೋಟಿ ರೂ., ಕಿಕ್ಕೇರಿ ಕೆರೆಗೆ 10 ಕೋಟಿ ರೂ., ಸಂತೇಬಾಚಹಳ್ಳಿಯ ಎರಡು ಕೆರೆಗಳು ಮತ್ತು ಮಾಳಗೂರು ಕೆರೆಗಳ ಅಭಿವೃದ್ಧಿಗೆ 10 ಕೋಟಿ ರೂ., ಕುಪ್ಪಹಳ್ಳಿ, ಸಾದುಗೋನಹಳ್ಳಿ ಮತ್ತು ವಡ್ಡರಹಳ್ಳಿ ಕೆರೆಗಳ ಅಭಿವೃದ್ಧಿಗೆ ತಲಾ 1 ಕೋಟಿ, ಬೆಡದಹಳ್ಳಿ ಕೆರೆ ಅಭಿವೃದ್ಧಿಗೆ 1.5 ಕೋಟಿ ರೂ. ಸೇರಿದಂತೆ ತಾಲೂಕಿನ ಹಲವು ಕೆರೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಒದಗಿಸಲಾಗಿದೆ. ವಿಠಲಾಪುರ ಏತ ನೀರಾವರಿ ಯೋಜನೆಗೂ ಮಂಜೂರಾತಿ ದೊರಕಿದೆ. ಇದರಿಂದ ವಿಠಲಾಪುರ ಗ್ರಾಮ ವ್ಯಾಪ್ತಿಯಿಂದ ಗವಿಮಠದವರೆಗೆ ನೀರಾವರಿ ಅನುಕೂಲವಾಗಲಿದೆ ಎಂದರು.
ವರದಿಗಳಿಗೆ ಸ್ಪಂದಿಸಿ: ಇಲಾಖಾ ಅಧಿಕಾರಿಗಳು ಪತ್ರಿಕೆಯ ವರದಿಗಳಿಗೆ ಸ್ಪಂದಿಸಬೇಕು. ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದರೆ ಅವುಗಳನ್ನು ಅನುಪಾಲನೆ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಧಿಕಾರಿಗಳು ಕಾಲಕಾಲಕ್ಕೆ ತಮ್ಮ ತಮ್ಮ ಇಲಾಖೆಯ ಪ್ರಗತಿಯ ವಿವರಗಳನ್ನು ಪತ್ರಿಕೆಗಳಿಗೆ ನೀಡಬೇಕೆಂದು ಸಚಿವ ಕೆ.ಸಿ.ನಾರಾಯಣಗೌಡ ಸೂಚಿಸಿದರು. ಕೃಷಿ, ತೋಟಗಾರಿಕೆ, ಅರಣ್ಯ ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಧನರಾಜ್, ಪಾಂಡವಪುರ ಉಪವಿಭಾಗಾಧಿಕಾರಿ ಅಕ್ರಂ, ತಹಸೀಲ್ದಾರ್ ಎಂ.ವಿ.ರೂಪಾ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜು, ತಾ.ಪಂ ಇಒ ಬಿ.ಎಸ್.ಸತೀಶ್ ಸಭಾ ವೇದಿಕೆಯಲ್ಲಿದ್ದರು.
ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಾದ ಕಿಜರ್ ಅಹಮದ್, ಗಂಗಾಧರ್, ಮಂಜುನಾಥ್, ಡಾ.ಮಧುಸೂದನ್, ಆರ್.ಎಸ್.ಸೀತಾರಾಂ, ಲೋಕೇಶ್, ರಾಜಶೇಖರ್, ವೆಂಕಟೇಶ್ ಸೇರಿದಂತೆ ಹಲವರು ತಮ್ಮ ತಮ್ಮ ಇಲಾಖಾ ಪ್ರಗತಿಯ ವಿವರಗಳನ್ನು ನಿಡಿದರು.