ಬೆಂಗಳೂರು: ಪರಿಶಿಷ್ಟ ಜಾತಿಗಳ ಗಣತಿ ಕಾರ್ಯ ಪರಿಶೀಲನೆ, ಮತ್ತೊಂದೆಡೆ ಸಮುದಾಯದ ಜಾಗೃತಿ ಮೂಡಿಸಲು ಮುಖಂಡರ ಜತೆಗೆ ನಿರಂತರ ಸಭೆ ನಡೆಸುವ ಮೂಲಕ ಎಸ್‌ಸಿ ಸಮಗ್ರ ಸಮೀಕ್ಷೆ ಚುರುಕುಗೊಳಿಸಲು ಸಚಿವರೇ ಬೆನ್ನತ್ತಿದ್ದಾರೆ.
ಸಮಗ್ರ ಸಮೀಕ್ಷೆ ಮೇ 6ರಂದು ಶುರುವಾಗಿದ್ದು, ಅದೇ ತಿಂಗಳಲ್ಲಿ ಮುಗಿಯಬೇಕಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಪದೇ ಪದೆ ಅವಧಿ ವಿಸ್ತರಣೆಯಾಗಿ ಜೂ.30ಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ.
ಬೆಂಗಳೂರು ಮಹಾನಗರದಲ್ಲಿ ಮಂದಗತಿಯಲ್ಲಿರುವುದು ಸಚಿವರು, ಶಾಸಕರು ಹಾಗೂ ಮುಖಂಡರಿಗೆ ತಲೆಬಿಸಿಯಾಗಿದೆ. ವಾರ್ಡ್‌ಗಳಲ್ಲಿ ಪಾದಯಾತ್ರೆ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿ, ಪ್ರೋತ್ಸಾಹಿಸಲು ಪ್ರಯತ್ನಿಸಿದ್ದಾರೆ.
ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಮುಖಂಡರು ಯಲಹಂಕ ತಾಲೂಕಿನ ಅಕರಕೆರೆ, ಸುರದೇವಪುರ, ಎಂ.ಎಸ್.ಪಾಳ್ಯ, ಬೆಟ್ಟಹಳ್ಳಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜಾತಿಗಳನ್ನು ನಮೂದಿಸಲು ಜನರಿಗೆ ಮನವಿ ಮಾಡಿದರು.
ಗಣತಿಯಾದ ಮನೆಗಳಿಗೆ ಬಿಬಿಎಂಪಿಯಿಂದ ಸ್ಟಿಕ್ಟರ್ ಅಂಟಿಸಿರುವುದನ್ನು ಗಮನಿಸಿದರು. ಕೆಲಸದ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕದ ವಿವರಗಳನ್ನು ಪಡೆದರು. ಕೆಲಸಕ್ಕೆ ಹೋಗುವ ಜನರ ಅನುಕೂಲಕ್ಕಾಗಿ ಬೆಳಗ್ಗೆ 6 ರಿಂದ 10 ಹಾಗೂ ಸಂಜೆ 5 ರಿಂದ 9ರವರೆಗೆ ಸಮೀಕ್ಷೆ ಕಾರ್ಯ ಗೊತ್ತುಪಡಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆ.ಎಚ್.ಮುನಿಯಪ್ಪ ವಿನಂತಿಸಿದರು.
ಸಮೀಕ್ಷೆ ಅವಧಿ ಯಾವುದೇ ಕಾರಣಕ್ಕೂ ಮತ್ತೆ ವಿಸ್ತರಣೆಯಾಗದಂತೆ ನೋಡಿಕೊಳ್ಳಲು ಸಚಿವರು, ಶಾಸಕರು ಸಂಕಲ್ಪ ಮಾಡಿದ್ದಾರೆ. ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗಕ್ಕೆ ಸಂಘಟನೆ ಮುಖಂಡರು ಈ ಕುರಿತು ಮನವಿ ಸಲ್ಲಿಸಿ, ಜೂ.30ಕ್ಕೆ ಕೊನೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಅವಧಿ ವಿಸ್ತರಣೆಯಾದಷ್ಟು ಸರ್ಕಾರಕ್ಕೆ ವರದಿ ಸಲ್ಲಿಕೆ ವಿಳಂಬವಾಗುತ್ತದೆ. ಇದರಿಂದ ಎಸ್‌ಸಿಗೆ ಒಳ ಕಲ್ಪಿಸುವುದು ಮುಂದಕ್ಕೆ ಹೋಗಲಿದೆ. ಅಷ್ಟು ಮಾತ್ರವಲ್ಲ, ಸ್ಥಗಿತವಾಗಿ ಸರ್ಕಾರ ಹುದ್ದೆಗಳ ನೇಮಕ ಪ್ರಕ್ರಿಯೆ ಮತ್ತೂ ತಡವಾಗಲಿದೆ ಎನ್ನುವುದು ಮುಖಂಡರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಬಹುತೇಕ ಶೇ.90ಕ್ಕೂ ಹೆಚ್ಚು ಸಮೀಕ್ಷೆ ಪ್ರಗತಿಯಾಗಿದೆ. ಬೆಂಗಳೂರಿನಲ್ಲಿ ಶೇ.60ರಷ್ಟಿದ್ದು, ಚುರುಕುಗೊಳಿಸಲು ಸಚಿವರು ಬೆನ್ನತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಬೆಂಗಳೂರಿನಲ್ಲಿ ಎಸ್‌ಸಿ ಜನಸಂಖ್ಯೆ 11 ಲಕ್ಷದಷ್ಟಿದ್ದು, ಅಷ್ಟು ಜನರನ್ನಾದರೂ ತಲುಪಬೇಕು ಎನ್ನುವುದು ಪ್ರಯತ್ನಿಸುತ್ತಿರುವ ಸಚಿವರು, ಮುಖಂಡರ ಇಚ್ಛೆಯಾಗಿದೆ.
ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಾಗೃತಿ ಸಭೆಯನ್ನು ಉದ್ದೇಶಿಸಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ ರಾಜ್ಯ ಸರ್ಕಾರ ನ್ಯಾಯ ಕೊಡಲು ಸಿದ್ಧವಾಗಿದೆ. ನೈಜ ಮಾಹಿತಿ ನೀಡಿ ಮೀಸಲಿನಲ್ಲಿ ನ್ಯಾಯ ಸಮ್ಮತ ಪಾಲು ಪಡೆಯಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಅಂಧ್ರ ಎಂಬ ಗೊಂದಲದಿಂದ ಹೊರ ಬಂದು ಮೂಲ ಜಾತಿ ಹೆಸರನ್ನು ನಮೂದಿಸಬೇಕು. ಮೂಲ ಜಾತಿ ಹೆಸರಿಸಲು ಹಿಂಜರಿದರೆ ನ್ಯಾಯಸಮ್ಮತ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂಬುದು ತಿಳಿದಿರಲಿ ಎಂದೂ ಹೇಳಿದರು.
ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ 120 ಕಾಲೊನಿಗಳಲ್ಲಿ ಪ್ರತಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ಲಭಿಸಬೇಕು. ನಿಖರವಾದ ದತ್ತಾಂಶಗಳಿಂದ ಮೀಸಲು ಹಂಚಿಕೆ, ಸರ್ಕಾರದ ಸೌಲಭ್ಯಗಳು ಸಿಗುತ್ತವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಒತ್ತಿ ಹೇಳಿದರು.