Arrest: ದೇವಸ್ಥಾನದ ನಿರ್ಬಂಧಿತ ಪ್ರದೇಶ ಪ್ರವೇಶ ತಡೆದಿದ್ದಕ್ಕೆ ಕರ್ತವ್ಯ ನಿರತ ಕಾನ್ಸ್ಟೇಬಲ್ ಒಬ್ಬರಿಗೆ ಆಂಧ್ರಪ್ರದೇಶ ಲೋಕೋಪಯೋಗಿ ಸಚಿವ ಬಿ.ಸಿ.ಜನಾರ್ದನ ರಡ್ಡಿ ಸಹೋದರ ಬಿ.ಸಿ.ಭೂಪಾಲ ರೆಡ್ಡಿ ಕಪಾಳಮೋಕ್ಷ ಮಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರದ ನಂದ್ಯಾಲ ಜಿಲ್ಲೆಯ ಕೊಲಿಮಿಗುಂಡ್ಲಾದ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಘಟನೆ ನಡೆದಿದೆ. ದೇವಸ್ಥಾನದ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆದಿದ್ದಕ್ಕೆ, ಹೇ ನಾನು ಯಾರು ಗೊತ್ತಾ? ಎಂದು ಕಾನ್ಸ್ಟೇಬಲ್ ಜಸ್ವಂತ್ ಕಪಾಳಕ್ಕೆ ಬಿ.ಸಿ.ಭೂಪಾಲ ರೆಡ್ಡಿ ಹೊಡೆದಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಖಂಡಿಸಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ,"ಇದು ಟಿಡಿಪಿ ನಾಯಕರು ಮತ್ತು ಅವರ ಕುಟುಂಬದವರ ದುರಹಂಕಾರ ಮತ್ತು ಕಾನೂನುಬಾಹಿರತೆಯ ಬಹಿರಂಗ ಪ್ರದರ್ಶನ. ಸಾರ್ವಜನಿಕವಾಗಿಯೇ ಒಬ್ಬ ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆದಿದೆ. ಆರೋಪಿ ವಿರುದ್ಧ ತಕ್ಷಣವಾಗಿ ಯಾವುದೇ ಕ್ರಮಕೈಗೊಂಡಿಲ್ಲ" ಎಂದು ಕಿಡಿಕಾರಿದೆ.
ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಘಟನೆ ಬಹಿರಂಗಪಡಿಸುತ್ತದೆ. ಈ ನಾಚಿಕೆಗೇಡಿನ ಕೃತ್ಯವು ಅಧಿಕಾರಕ್ಕೆ ಹತ್ತಿರವಿರುವವರು ಅನುಭವಿಸುತ್ತಿರುವ ಶಿಕ್ಷೆಯ ವಿನಾಯಿತಿಯನ್ನು ಪ್ರತಿಬಿಂಬಿಸುತ್ತದೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಅಧಿಕಾರದಲ್ಲಿರುವವರು ಬಿಡುವುದಿಲ್ಲ" ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ಜನಾರ್ದನ ರೆಡ್ಡಿ, ಕಾನ್ಸ್ಟೇಬಲ್ ಮೇಲೆ ತಮ್ಮ ಸಹೋದರ ನಡೆಸಿದ ಹಲ್ಲೆಯನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಯಾರೇ ಆಗಿರಲಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)