ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದ್ದ ಹೈಕೋರ್ಟ್ ಆದೇಶವನ್ನು ‘ರಾಜಕೀಯ ತೀರ್ಪು ’ಎಂದು ವ್ಯಾಖ್ಯಾನಿಸಿದ್ದ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸುವಂತೆ ಕೋರಿ ಎಜೆ ಕೆ. ಶಶಿಕಿರಣ್ ಶೆಟ್ಟಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜಿ. ಅಬ್ರಹಾಂ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಳ್ಳುವ ಜಮೀರ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ನ್ಯಾಯಾಂಗ ನಿಂದನೆ ಕಾಯ್ದೆ 1971 ಸೆಕ್ಷನ್ 15(1)(ಬಿ) ಅಡಿ ಒಪ್ಪಿಗೆ ನೀಡುವಂತೆ ಅಡ್ವೊಕೇಟ್ ಜನರಲ್‌ಗೆ ಅರ್ಜಿಯಲ್ಲಿ ದೂರುದಾರ ಅಬ್ರಹಾಂ ಮನವಿ ಮಾಡಿದ್ದಾರೆ.
ಸೆ.26ರಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ಜಮೀರ್ ಅವರು ಹೈಕೋರ್ಟ್ ತೀರ್ಪನ್ನು ‘ಪೊಲಿಟಿಕಲ್ ಜಡ್ಜ್‌ಮೆಂಟ್’ ಎಂದು ವ್ಯಾಖ್ಯಾನಿಸಿದ್ದರು. ಆ ಮೂಲಕ ಉದ್ದೇಶಪೂರ್ವಕವಾಗಿ ಜಮೀರ್ ನ್ಯಾಯಾಂಗದ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ. ಸಚಿವರ ಹೇಳಿಕೆಗೆ ಸಂಬಂಧಿಸಿದ ಎಲ್ಲ ಸಾಕ್ಷಾೃಧಾರಗಳು ಲಭ್ಯವಿವೆ. ಹೀಗಾಗಿ ಅವರ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲು ಸೂಕ್ತವಾಗಿದೆ ಎಂದು ವಿವರಿಸಲಾಗಿದೆ. ಈ ನೆಲೆಯಲ್ಲಿ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸುವಂತೆ ಅಡ್ವೊಕೇಟ್ ಜನರಲ್‌ಗೆ ಕೋರಲಾಗಿದೆ.
ರಾಜ್ಯ ಮಟ್ಟದಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಡ್ವೊಕೇಟ್ ಜನರಲ್ ಅನುಮತಿ ಪಡೆಯುವುದು ಮತ್ತು ರಾಷ್ಟ್ರಮಟ್ಟದಲ್ಲಿ ಅಟಾರ್ನಿ ಜನರಲ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮಸಿ ಬಳಿಯುವ ಯತ್ನ
ಸಚಿವ ಜಮೀರ್ ಅವರು ತೀರ್ಪು ಹೊರಡಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪ್ರಾಮಾಣಿಕತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದು, ಜನರ ದೃಷ್ಟಿಯಲ್ಲಿ ಹೈಕೋರ್ಟ್ ಅನ್ನು ನಕಾರಾತ್ಮಕವಾಗಿ ತೋರ್ಪಡಿಸುವ ಪ್ರಯತ್ನ ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಕಾಯ್ದೆಯ ಉದ್ದೇಶ ನ್ಯಾಯದಾನ ಮಾಡುವ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವುದು ಮಾತ್ರವಲ್ಲದೆ, ತೀರ್ಪು ನೀಡುವ ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ಪಾವಿತ್ರ್ಯತೆ ಎತ್ತಿ ಹಿಡಿಯುವುದೂ ಆಗಿದೆ ಎಂದೂ ಟಿ.ಜಿ. ಅಬ್ರಹಾಂ ಪತ್ರದಲ್ಲಿ ವಿವರಿಸಿದ್ದಾರೆ.