ಚಿಕ್ಕಬಳ್ಳಾಪುರ: ರೈತರಿಗೆ ಕೃಷಿ ಉತ್ಪನ್ನದ ಮಾರಾಟದ ಹಣವನ್ನು ಪಾವತಿಸದೇ ಸತಾಯಿಸುತ್ತಿದ್ದ ವ್ಯಾಪಾರಿ ಪರವಾಗಿ ಹೊಂದಾಣಿಕೆಗೆ ಪೊಲೀಸರ ಮೇಲೆ ಒತ್ತಡ ಹೇರುವ ವಸತಿ ಸಚಿವ ಜಮೀರ್ ಅಹಮದ್ ಆಡಿಯೋ ವೈರಲ್ ಆಗಿದ್ದು ವಂಚನೆಯ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಪೆರೇಸಂದ್ರದ ರೈತ ರಾಮಕೃಷ್ಣ ಜಮೀನಿನಲ್ಲಿ ಬೆಳೆದಿದ್ದ ೧.೧೬ ಕೋಟಿ ರೂ ವೆಚ್ಚದ ಪಾಪ್ ಕಾರ್ನ್ ಅನ್ನು ಹೈದರಬಾದ್ ಮೂಲದ ಅಕ್ಟರ್ ಪಾಷಾ ಎಂಬುವರಿಗೆ ಮಾರಿದ್ದರು. ಆದರೆ, ಕಳೆದ ೧ ವರ್ಷದಿಂದ ವ್ಯಾಪಾರಿ ಹಣವನ್ನು ನೀಡಿರಲಿಲ್ಲ. ಇದರಿಂದ ಹಲವು ಬಾರಿ ಅಲೆದಾಡಿ, ಹೈರಣಾರಾಗಿದ್ದ ರೈತ ಇಲ್ಲಿನ ಪೆರೇಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿ ವ್ಯಾಪಾರಿಯನ್ನು ಬಂಧಿಸಿದ್ದು ಈ ಬೆಳವಣಿಗೆಯ ಮಧ್ಯೆ ಜಮೀರ್ ಅಹಮದ್ ಪ್ರಕರಣವನ್ನು ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಲು ಇಲ್ಲಿನ ಪಿಎಸ್‌ಐ ಜಗದೀಶ್ ರೆಡ್ಡಿಗೆ ಮೊಬೈಲ್ ಕರೆ ಮಾಡಿ ಸೂಚಿಸಿದ್ದಾರೆ. ಇದರ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
*ಸಚಿವರ ವರ್ತನೆಗೆ ಆಕ್ರೋಶ
ಸಾಲವನ್ನು ಮಾಡಿ ಪೆರೇಸಂದ್ರ ರೈತ ರಾಮಕೃಷ್ಣ ಪಾಪ್ ಕಾರ್ನ್ ಬೆಳೆ ಬೆಳೆದಿದ್ದು ಬಂದ ಒಳ್ಳೆಯ ಇಳುವರಿಯನ್ನು ಒಪ್ಪಂದ ಮಾಡಿಕೊಂಡು ವ್ಯಾಪಾರಿಗೆ ಮಾರಿದ್ದರು. ಆದರೆ, ಅವರಿಗೆ ಬರಬೇಕಾದ ಹಣ ಸಿಕ್ಕಿರಲಿಲ್ಲ. ದುರುದ್ದೇಶದಿಂದ ಖರೀದಿದಾರ ಅಲೆದಾಡಿಸುತ್ತಿದ್ದ ಹಿನ್ನೆಲೆಯಲ್ಲಿ ನೋವು ಅನುಭವಿಸಿದ್ದು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಒಂದು ವರ್ಷದ ಸಮಸ್ಯೆಯು ಬಗೆಹರಿಯುವ ಹಂತದಲ್ಲಿ ಸಚಿವರು ವ್ಯಾಪಾರಿಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ರೈತರಿಗಿಂತಲೂ ತೆಲಂಗಾಣದ ವ್ಯಾಪಾರಿಗಳ ಹಿತವೇ ಜಮೀರ್ ಅಹಮದ್‌ಗೆ ಮುಖ್ಯವಾಗಿದೆ. ಅವರು ವಹಿವಾಟಿನಲ್ಲಿ ಪಾಲುದಾರಿಕೆ ಹೊಂದಿರುವುದರ ಬಗ್ಗೆ ಅನುಮಾನ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
*ಅಡಿಯೋ ವೈರಲ್
ಪೆರೇಸಂದ್ರ ಠಾಣೆಯ ಪಿಎಸ್‌ಐ ಜಗದೀಶ್ ಹಾಗೂ ಸಚಿವ ಜಮೀರ್ ಅಹಮದ್ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಠಾಣೆಗೆ ಕರೆದುಕೊಂಡು ಬಂದಿರುವ ತೆಲಂಗಾಣದ ವ್ಯಾಪಾರಿಗಳು ನನ್ನ ಸಂಬಂಧಿಕರು, ಅವರಿಗೆ ಒಂದು ಅವಕಾಶ ಕೊಡಿ, ಪ್ರಕರಣವನ್ನು ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಿ, ಇದೊಂದು ಕೆಲಸ ಮಾಡಿಕೊಡಿ ಎಂದು ಸಚಿವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಿಎಸ್‌ಐ, ಆರೋಪಿಗಳಿಗೆ ಹಲವು ಬಾರಿ ಹೇಳಿದರೂ ಕೇಳಲಿಲ್ಲ, ಒಪ್ಪಂದಕ್ಕೂ ಬರಲಿಲ್ಲ, ಈಗ ಎಫ್ ಐಆರ್ ದಾಖಲಾಗಿದೆ. ಎರಡೂ ಕಡೆಯವರು ಒಪ್ಪಿಕೊಂಡರೆ ಬಿ ರಿಪೋರ್ಟ್ ಹಾಕಲಾಗುವುದು ಎಂಬುದಾಗಿ ಹೇಳಿದ್ದಾರೆ.