ತುಮಕೂರು: ಸಿಎಂ ಸಿದ್ದರಾಮಯ್ಯ ಜತೆ ನಾನು ರಾಜಿ ಮಾಡಿಕೊಂಡಿದ್ದೇನೆಂದು ಕೇಂದ್ರ ಸಚಿವ ವಿ.ಸೋಮಣ್ಣ ಅಚ್ಚರಿ ಹೇಳಿಕೆ ನೀಡಿದರು.
ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ಶನಿವಾರ ರೈಲ್ವೆ ಯೋಜನೆ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಜೀ ಹಣದ ಬಗ್ಗೆ ಕೇಳುವುದಿಲ್ಲ, ಅಭಿವೃದ್ಧಿ ಕುರಿತು ಮಾತ್ರ ಮಾತನಾಡುತ್ತಾರೆ. ಹಾಗಾಗಿ, ನಾನು ಸಿದ್ದರಾಮಯ್ಯ ಜತೆ ರಾಜಿ ಮಾಡಿಕೊಂಡಿದ್ದೇನೆ ಎಂದರು. ಪತ್ರಕರ್ತರು ಈ ಸಂದರ್ಭದಲ್ಲಿ ಯಾವ ವಿಚಾರಕ್ಕೆ ಎಂದಾಗ, " ಹಣ ಅಲ್ಲಪ್ಪ, ಅಭಿವೃದ್ಧಿ, ರೈಲ್ವೆ ಯೋಜನೆ ವಿಚಾರಕ್ಕೆ ಕಣ್ರಪ್ಪಾ.. ಇನ್ಯಾವ ವಿಚಾರವಿದೆ ಎಂದು ಕೈಮುಗಿದರು.
ನಮ್ಮ ಕಾಲದಲ್ಲೇ ಮೆಟ್ರೋ
ರಾಜ್ಯ ಸರ್ಕಾರವು ತುಮಕೂರಿಗೆ ಮ್ರೆಟೋ ಯೋಜನೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈಗಾಗಲೇ ವಿಸತ ಯೋಜನಾ ವರದಿ ಕೂಡ ಸರ್ಕಾರದ ಕೈತಲುಪಿದ್ದು ಮಾದಾವರದಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆಯಾಗುತ್ತದೆ. ಇದು ಕೇಂದ್ರ ವ್ಯಾಪ್ತಿಗೆ ಬರಲಿದ್ದು ನಮ್ಮ ಕಾಲದಲ್ಲೇ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಿದ್ದೇವೆ. ಕಳೆದ 10 ವರ್ಷಗಳಲ್ಲಿ 50 ವರ್ಷಗಳ ರೈಲ್ವೆ ಇಲಾಖೆ ಯೋಜನೆಗಳು ಆಗಿವೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ಇನ್ನೊಂದು ತಿಂಗಳಲ್ಲಿ ದೊಡ್ಡ ಸುದ್ದಿ
ಪ್ರತಿಬಾರಿ ರೈಲ್ವೆ, ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಇನ್ನೊಂದು ತಿಂಗಳಲ್ಲಿ ತುಮಕೂರಿನ ಜನತೆಗೆ ಒಂದು ದೊಡ್ಡ ಸುದ್ದಿ ಕೊಡುತ್ತೇವೆ ಎಂದು ಹೇಳುತ್ತಿದ್ದ ಸೋಮಣ್ಣ ಮತ್ತೇ ಅದನ್ನೇ ಪುನರುಚ್ಚರಿಸಿದರು. ಅದು ಇಡೀ ತುಮಕೂರಿನ ಚಿತ್ರಣವನ್ನೇ ಬದಲಾವಣೆ ಮಾಡುತ್ತದೆ. ಇನ್ನು ಕೆಲವೇ ದಿನಗಳಲ್ಲಿ ತುಮಕೂರು ಬೆಂಗಳೂರಿನ ಎರಡನೇ ನಗರವಾಗಿ ಬೆಳೆಯುವುದು ಗ್ಯಾರೆಂಟಿ ಎಂದು ಸಚಿವ ಸೋಮಣ್ಣ ಹೇಳಿದರು.