ಸೊರಬ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಆರ್.ಯತೀಶ್, ಮಂಜುಳಾ ಬಿ.ಹೆಗಡಾಳ, ಚಂದನ್ ಇತರರಿದ್ದರು. 
ನ್ಯೂಸ್

ಕುಡಿಯುವ ನೀರಿನ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ

ಸೊರಬ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೂ ಶರಾವತಿ ನದಿಯಿಂದ ಸಮರ್ಪಕ ಕುಡಿಯುವ ನೀರಿನ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲಿಯೇ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಗ್ಗಿಸಲು ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಶರಾವತಿ ಕುಡಿಯುವ ನೀರಿನ ಯೋಜನೆ ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಬೇಕಿದೆ ಎಂದರು.
ಯೋಜನೆಗೆ ಸಂಬಂಧಿಸಿದಂತೆ ಸಾಗರ ಹಾಗೂ ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಗೆ ಸೊರಬದಲ್ಲಿ ಒಳಚರಂಡಿ ವ್ಯವಸ್ಥೆಗೆ ಜಾಗವನ್ನು ಹಸ್ತಾಂತರ ಹಾಗೂ ಸರ್ವೇ ಕಾರ್ಯ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿದಾಗ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿತು. ಪಟ್ಟಣದ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಬಾರದು. ಪಟ್ಟಣವನ್ನು ಆಧುನಿಕತೆಯ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುವುದು ಎಂದರು. ಪುರಸಭೆ ವ್ಯಾಪ್ತಿಗೆ ಒಳಪಟ್ಟ ಕೊಡಕಣಿ, ಹಳೇಸೊರಬ, ಚಿಕ್ಕಶಕುನ, ಸೀಗೇಹಳ್ಳಿ, ನಡಹಳ್ಳಿ, ಜೇಡಿಗೇರಿ, ಮರೂರು ಗ್ರಾಮಗಳು ಗ್ರಾಪಂಯಿಂದ ಹಸ್ತಾಂತರಗೊಂಡಿದ್ದು ಅಲ್ಲಿನ ಸೊತ್ತುಗಳ ನಿರ್ವಹಣೆಗೆ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಯಿತು.·ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಆರ್.ಯತೀಶ್, ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ, ಪ್ರಭಾರ ಮುಖ್ಯಾಧಿಕಾರಿ ಚಂದನ್, ಸೇರಿದಂತೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರಿದ್ದರು.