ನ್ಯೂಸ್

ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರ; ಇದರ ಬಗ್ಗೆ ನಾನು ಮಾತನಾಡಲ್ಲ: ಸಾರಿಗೆ ಸಚಿವರು ಹೇಳಿದ್ದಿಷ್ಟು

ಬಳ್ಳಾರಿ: ಇಂದು ಗಣಿನಾಡು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಭಾಗವಹಿಸಿ, ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದ 223 ತಾಲೂಕಿನಲ್ಲಿ ಬರವಿದೆ, 07 ತಿಂಗಳವರೆಗೂ ಕೇಂದ್ರ ಅನುದಾನ ಬಿಡುಗಡೆ ಮಾಡಿರಲಿಲ್ಲ. ಸುಪ್ರೀಂಕೋರ್ಟ್​ ಮೊರೆ ಹೋದ್ಮೇಲೆ ಸ್ವಲ್ಪ ಹಣ ನೀಡಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ಹಣ ಬಿಡುಗಡೆಗೆ ಒತ್ತಾಯ ಮಾಡಲಿಲ್ಲ. ಬರ ಪರಿಹಾರ ಕೇಳಲು ಬಿಜೆಪಿ ಸಂಸದರು ಮುಂದೆ ಬರ್ತಿಲ್ಲ ಎಂದರು.

ಇನ್ನು ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಪ್ರಕರಣವನ್ನು ಎಸ್​ಐಟಿ ತನಿಖೆಗೆ ವಹಿಸಲಾಗಿದೆ. ಎಲ್ಲ ಕ್ರಮ ವಿಶೇಷ ತನಿಖಾ ತಂಡವೇ ವಹಿಸಲಿದೆ. ಇನ್ವೆಸ್ಟಿಗೇಷನ್​ ಹಂತದಲ್ಲಿ ನಾವು ಹೋಗಬಾರದು. ಈ ಹಂತದಲ್ಲಿ ನಾನು ಮಾತಾಡೋದು ಸೂಕ್ತವಲ್ಲ. ಮಾತನಾಡಿದರೆ ಪ್ರಕರಣದ ಮೇಲೆ ಪ್ರಭಾವ ಬೀರುತ್ತದೆ" ಎಂದು ಹೇಳಿದರು.

ಯಾವುದೇ ಘಟನೆ ಆದರೂ ಕುಮಾರಸ್ವಾಮಿ ಡಿಸಿಎಂ ಅವರನ್ನು ಮಹಾನಾಯಕ ಅಂತಾ ನೂರು ಬಾರಿ ಹೇಳ್ತಾರೆ. ಈಗ ಏಕೆ ಮೌನಿಯಾಗಿದ್ದಾರೆ? ಯುಪಿಎ ಸರ್ಕಾರದ ಅವಧಿಯಲ್ಲೂ ಅಣ್ಣಾ ಹಜಾರೆ ಹೋರಾಟ ಮಾಡಿದ್ದರು. 2G ಹಗರಣ, ಕಲ್ಲಿದ್ದಲು ಅಂತಾ ಅಂದರು. ಕೊನೆಗೆ ಏನಾಯ್ತು? ಕಲ್ಲಿದ್ದಲು ಇಲ್ಲ, ಹಗರಣವು ಇಲ್ಲ, ಎಲ್ಲವೂ ಕ್ಲಿಯರ್ ಆಯಿತು. ಸದ್ಯ ಬಿಜೆಪಿ ವಿಕೃತ ಮನೋಭಾವ ಬಿಡಬೇಕು. ಎಲ್ಲರೂ ಒಂದು ಅಂತಾ ತಿಳಿದುಕೊಳ್ಳಬೇಕು ಎಂದಿದ್ದಾರೆ.