ಬೆಂಗಳೂರು: ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಕರೊನಾ ಕರಿ ನೆರಳು ಆವರಿಸಿದ್ದು, ರಾಜ್ಯ ಸರ್ಕಾರ ಕರೊನಾ ರೂಲ್ಸ್ ಜಾರಿ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆಯೂ ಮಾಸ್ಕ್ ಧರಿಸೋದು ಕಡ್ಡಾಯ. ಅಷ್ಟೇ ಅಲ್ಲ, ರಾಜ್ಯಾದ್ಯಂದ ನ್ಯೂ ಇಯರ್ ಪಾರ್ಟಿಗೆ ಮಕ್ಕಳು ಮತ್ತು ಗರ್ಭಿಣಿಯರಿಗೆ ನಿಷೇಧ ಹೇರಲಾಗಿದೆ. ಉಳಿದಂತೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕರೊನಾ ರೂಲ್ಸ್ ಪಾಲಿಸಬೇಕು. ಮಾಸ್ಕ್ ಧರಿಸಿಯೇ ಇರಬೇಕು!
ಕೋವಿಡ್ ನಿಯಂತ್ರಣಾ ಕುರಿತು ತಜ್ಞವೈದ್ಯರ ತಂಡದೊಂದಿಗೆ ಸೋಮವಾರ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಚೀನಾ ಮತ್ತು ಬೇರೆ ಬೇರೆ ದೇಶದಲ್ಲಿ ಕೋವಿಡ್ ಸೋಂಕಿತ ಸಂಖ್ಯೆ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇಶದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಸಿನಿಮಾ ಥಿಯೇಟರ್ಗಳಲ್ಲಿ ಮಾಸ್ಕ್ ಧರಿಸಿವುದು ಕಡ್ಡಾಯ. ಶಾಲಾ-ಕಾಲೇಜುಗಳ ತರಗತಿಯೊಳಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ವಿಮಾನದಲ್ಲಿ ಬರುವ ಪ್ರಯಾಣಿಕರ ತಪಾಸಣೆಗಾಗಿ ಮಂಗಳೂರಿನ ವೆನ್ಲಾಕ್ ಮತ್ತು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಬ್, ಕ್ಲಬ್, ಬಾರ್, ಶಾಲಾ ಕಾಲೇಜುಗಳಲ್ಲೂ ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬಳಕೆ ಕಡ್ಡಾಯ. ರೆಸಾರ್ಟ್ಗಳಲ್ಲಿ ಕರೊನಾ ರೂಲ್ಸ್ಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು. ಬಾರ್ ಸಿಬ್ಬಂದಿ ಮಾತ್ರವಲ್ಲ ಬಾರ್ಗೆ ಬರೋ ಗ್ರಾಹಕರಿಗೂ ಡಬಲ್ ಡೋಸ್ ಹಾಕಿಸಿಕೊಂಡಿರಬೇಕು. ಈ ರೂಲ್ಸ್ ಪಾರ್ಟಿಗಳಿಗೂ ಅನ್ವಯ ಎಂದು ಅಶೋಕ್ ತಿಳಿಸಿದರು.