ನ್ಯೂಸ್

ಮೋದಿ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟಿದ ಸಚಿವ ಪ್ರಿಯಾಂಕ್ ಖರ್ಗೆ: ಬಿಜೆಪಿ ದೂರು

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಭಾಷಣದ ವಿಡಿಯೋವನ್ನು ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮಿಷ್ಟದಂತೆ ಕತ್ತರಿಸಿ, ಮೋದಿಯವರು ಕರ್ನಾಟಕದ ವಿರೋಧಿಗಳು ಎಂಬ ಭಾವನೆ ಬರುವಂತೆ ಚಿತ್ರಿಸಿದ್ದಾರೆ.  ಇದರೊಂದಿಗೆ ' ಕನ್ನಡಿಗರು ಪಾಪ ಮಾಡಿದವರು' ಎನ್ನುವ ಪ್ರಧಾನಿ ಮೋದಿಯವರೆ, ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ ? ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲ ತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪಕ್ಷದ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎಂ.ಯಶವಂತ್, ಬೆಂಗಳೂರು ಕೇಂದ್ರ ಜಿಲ್ಲಾ ಸಹ ಸಂಚಾಲಕ ಜಂಟಿಯಾಗಿ ಸೋಮವಾರ ದೂರು ಸಲ್ಲಿಸಿದ್ದಾರೆ. ಮೋದಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಕರ್ನಾಟದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಿಸಾನ್ ಸಮ್ಮಾನ್ ನಿಧಿಯಡಿ ನಾಲ್ಕು ಸಾವಿರ ರೂ ಸೇರಿಸಿ ರೈತರಿಗೆ ನೀಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿತು. ಇವರುಗಳು ಮಾಡಿದ ಪಾಪಕ್ಕೆ ಸೂಕ್ತ ಉತ್ತರ ನೀಡಬೇಕು ಎಂದಿದ್ದರು.

ಪ್ರಚಾರಕ್ಕೆ ನಿರ್ಬಂಧ ಆಗ್ರಹ

ಕತ್ತರಿಸಿರುವ ವಿಡಿಯೋ ಕಾನೂನುಬಾಹಿರವಾಗಿದೆ. ಈ ರೀತಿಯ ವಿಡಿಯೋ ಹಂಚಿಕೊಂಡು ಮೋದಿಯವರ ವಿರುದ್ಧ ಕನ್ನಡಿಗರಲ್ಲಿ ದ್ವೇಷ ಭಾವನೆ, ಎತ್ತಿಕಟ್ಟುವ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಕಾನೂನು ಪ್ರಕಾರ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮಕೈಗೊಂಡು, ಚುನಾವಣಾ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ಬಿಜೆಪಿ ಕಾನೂನು ಪ್ರಕೋಷ್ಠ ಆಗ್ರಹಿಸಿದೆ.

ಪ್ರಕೋಷ್ಠದ ಎಂ.ಯಶವಂತ್, ಬೆಂಗಳೂರು ದಕ್ಷಿಣ ಜಿಲ್ಲೆ ಸದಸ್ಯ ಎಂ.ರಘು ಜಂಟಿಯಾಗಿ ನೀಡಿದ ಮತ್ತೊಂದು ದೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಷಣ ಎಡಿಟ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದನ್ನು ಉಲ್ಲೇಖಿಸಿ, ಕ್ರಮಕ್ಕೆ ಮನವಿ ಮಾಡಿದ್ದಾರೆ

ಯತೀಂದ್ರ ಸಿದ್ದರಾಮಯ್ಯ ಫ್ಯಾನ್ಸ್ ಹೆಸರಿನಲ್ಲಿ, ದುರ್ಗೇಶ್ ವಿಭೂತಿ, ಎಸ್ ವಿ ಡಿಎಸ್ ಎಸ್- ನೈಜ ಅಲೆ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದೆ. ದ್ವೇಷ ಭಾವನೆ ಬಿತ್ತುವ ದುರುದ್ದೇಶ‌ದ ಈ ಕೃತ್ಯದ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಬಿಜೆಪಿ ಕಾನೂನು ಪ್ರಕೋಷ್ಠ ಒತ್ತಾಯಿಸಿದೆ.