ಆನವಟ್ಟಿ: ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಹಾಗೂ ಸುಳ್ಳಿನ ಆಧಾರದ ಮೇಲೆ ನಡೆಯುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ಕುಬಟೂರು ಗಾಮದಲ್ಲಿ ಮತ ಚಲಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರಾೃನಂತರ ದೇಶ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಂಪನ್ಮೂಲ ಕ್ರೋಡೀಕರಿಸಿ ಕಾಂಗ್ರೆಸ್ 70 ವರ್ಷಗಳ ದೀರ್ಘಾವಧಿ ಆಡಳಿತ ನಡೆಸಿ ಜನತೆಯ ಪ್ರೀತಿಗೆ ಪಾತ್ರವಾಗಿದೆ. ಬಿಜೆಪಿ ಅವರು ಭಾವನಾತ್ಮಕವಾಗಿ ಚುನಾವಣೆ ನಡೆಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳದೆ ಕೇವಲ ಮೋದಿ ಎಂಬ ಹೆಸರಿನ ಮೇಲೆ ಮತ ಕೇಳುತ್ತಿದ್ದು, ಇಲ್ಲಿಯ ಅಭ್ಯರ್ಥಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಈವರೆಗೂ ನ್ಯಾಯ ದೊರೆತಿಲ್ಲ. ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪುನಃ ಆರಂಭಿಸಲಿಲ್ಲ. ಇದರಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ ಎಂದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ಭರವಸೆ ನೀಡಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದು ಜನತೆಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಹೆಚ್ಚಾಗಿದೆ. ಹೀಗಾಗಿ ಗೀತಾ ಶಿವರಾಜ್ ಕುಮಾರ್ ಸಂಸದರಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಖಿದರು.
ಜನತೆಗೆ ಕಾಂಗ್ರೆಸ್‌ನ ಬಗ್ಗೆ ಒಲವು ಮೂಡಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಹತಾಶ ಭಾವನೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಜನತೆಗೆ ಬಿಜೆಪಿಯವರ ಸುಳ್ಳು ಅರ್ಥವಾಗಿದೆ. ದೇಶದ ಐಕ್ಯತೆ ಹಾಗೂ ಭದ್ರತೆಗಾಗಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದರು.