ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬುಧವಾರ ಸಂಜೆ ನೆಹರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣದ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳ ಮಾಹಿತಿ ಪಡೆದ ಅವರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರೀಡಾಪಟುಗಳಿಗೆ ತೊಂದರೆ ಆಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡ, ನೀರಿನ ಟ್ಯಾಂಕ್ ಹಾಗೂ ಇನ್ನಿತರ ಕಾಮಗಾರಿಗಳು ಕಳಪೆಯಾಗಿದ್ದು ನೀರಿನ ಟ್ಯಾಂಕ್ ಸೋರುತ್ತಿದೆ ಎಂದು ಸಾರ್ವಜನಿಕರು ದೂರಿದರು. ಇದರಿಂದ ಕುಪಿತಗೊಂಡ ಸಚಿವರು ಆ.16ರಂದು ನಡೆಯುವ ಮಹಾನಗರ ಪಾಲಿಕೆ ಸಭೆಗೆ ಸಂಪೂರ್ಣ ಮಾಹಿತಿ ಹಾಗೂ ಕಳಪೆ ಕಾಮಗಾರಿ ಪಟ್ಟಿಯೊಂದಿಗೆ ಬರಬೇಕೆಂದು ಆದೇಶಿಸಿದರು. ಒಂದೆರಡು ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯದೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಫುಟ್ಬಾಲ್ ಆಟಗಾರರಿಗೆ ಅನುಕೂಲವಾಗುವಂತೆ ಗ್ರೀನ್ ಲಾನ್ ಅಳವಡಿಸುವಂತೆ ಸೂಚಿಸಿದರು. ಇದೇ ವೇಳೆ ಫುಟ್ಬಾಲ್ ಆಟಗಾರರು ಟೂರ್ನಮೆಂಟ್‌ಗೆ ತೆರಳಲು ಅಗತ್ಯವಿರುವ ಜರ್ಕಿನ್, ಶೂ ಹಾಗೂ ಶಾರ್ಟ್ಸ್‌ಗಳನ್ನು ಒದಗಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು, ವೈಯಕ್ತಿಕ ಹಣದಿಂದ ತಮಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.