ನ್ಯೂಸ್

ಸಿದ್ಧೇಶ್ವರ ಸ್ವಾಮೀಜಿಗಳ ಹೊತ್ತಿಗೆ ಉಲ್ಲೇಖ, ಲಿಂಗಾಯತ ಜಾಗತಿಕ ಧರ್ಮ, ಕನ್ಹೇರಿ ಶ್ರೀ ಬಂಡತನ ಬಿಟ್ಟು ಕ್ಷಮೆ ಕೇಳಲಿ ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಲಿಂಗಾಯತ ಜಾಗತಿಕ ಧರ್ಮ ಎಂದು ಸಿದ್ಧೇಶ್ವರ ಸ್ವಾಮೀಜಿಗಳೇ ಗುರುತಿಸಿದ್ದಾರೆ. ಅವರು ಬರೆದಿರುವ ‘ಜಾಗತಿಕ ಧರ್ಮಗಳ ಸಾರ ಸೂಕ್ತಿಗಳು’ ಎಂಬ ಪುಸ್ತಕದಲ್ಲಿ ಜಾಗತಿಕ ಲಿಂಗಾಯತ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಕೂಡ ಇದೆ. ಹಾಗಂತ ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ತಮ್ಮ ‘ಆಡು ಭಾಷೆ’ಯಲ್ಲಿ ಸಿದ್ಧೇಶ್ವರ ಶ್ರೀಗಳನ್ನೂ ಟೀಕಿಸುತ್ತಾರಾ? ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಜಿಲ್ಲಾಡಳಿತ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಚರ್ಚೆ ಮಾಡುವವರು ಅದೇ ಕನ್ಹೇರಿ ಶ್ರೀಗಳು ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದರ ಕುರಿತು ಚರ್ಚೆ ಮಾಡುತ್ತಿಲ್ಲವೇಕೆ ? ಎಂದು ಶನಿವಾರ ಸುದ್ದಿಗಾರರನ್ನೇ ಪ್ರಶ್ನಿಸಿದ ಅವರು, ಅಷ್ಟಕ್ಕೂ ಕನ್ಹೇರಿ ಶ್ರೀಗಳಿಗೆ ನಿರ್ಬಂಧ ವಿಧಿಸಿರುವುದು ಜಿಲ್ಲಾಡಳಿತ. ಹೈಕೋರ್ಟ್ ಸಹ ಜಿಲ್ಲಾಡಳಿತದ ಆದೇಶ ಎತ್ತಿ ಹಿಡಿದಿದೆ. ಹೀಗಾಗಿ ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿರುವ ಕಾರಣ ಆ ಕುರಿತು ಚರ್ಚೆ ಬೇಡ ಎಂದರು.

ಸಿದ್ಧೇಶ್ವರ ಶ್ರೀಗಳ ಹೆಸರು ತೆಗೆದುಕೊಳ್ಳಲು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳಿಗೆ ನೈತಿಕ ಹಕ್ಕು ಇಲ್ಲ. ಸಿದ್ಧೇಶ್ವರ ಶ್ರೀಗಳು 50 ವರ್ಷಗಳ ಕಾಲ ಸುದೀರ್ಘವಾಗಿ ಪ್ರವಚನ ನೀಡಿದ್ದಾರೆ. ಅವರೆಂದು ಇಂಥ ಪದ ಬಳಸಿಲ್ಲ. ಅವರ ಆಡು ಭಾಷೆಯನ್ನು ಕನ್ಹೇರಿ ಶ್ರೀಗಳು ಕಲಿಯಲಿ. ಸಿದ್ಧೇಶ್ವರ ಶ್ರೀಗಳೆಂದಾದರೂ ಕನ್ಹೇರಿ ಶ್ರೀಗಳಂಥ ಆಡು ಭಾಷೆ ಬಳಸಿದ್ದಾರೆಯೇ? ಅವರ ಶಿಷ್ಯರಾದ ಕನ್ಹೇರಿ ಶ್ರೀಗಳು ಸಹ ಸಿದ್ಧೇಶ್ವರ ಸ್ವಾಮೀಜಿಗಳ ಭಾಷೆ ಕಲಿಯಬೇಕಿತ್ತಲ್ಲವೇ?ಸಿದ್ಧೇಶ್ವರ ಸ್ವಾಮೀಗಳ ಬಗ್ಗೆ ಅಭಿಮಾನ ಹೊಂದಿದವರು, ಅವರೊಂದಿಗೆ ಬೆಳೆದವರು ಕಲಿತಿದ್ದೇನು? ಒಬ್ಬ ಸ್ವಾಮೀಜಿ ಇನ್ನೊಬ್ಬ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಬಾರದು. ವೈಯಕ್ತಿಕವಾಗಿ ಕನ್ಹೇರಿ ಸ್ವಾಮೀಜಿಗಿಂತಲೂ ಉತ್ತಮವಾದ ಆಡು ಭಾಷೆ ನನಗೂ ಬರಲಿದೆ ಎಂದು ಎಂ.ಬಿ. ಪಾಟೀಲ ಚಾಟಿ ಬೀಸಿದರು.

ಕನ್ಹೇರಿಯ ಸ್ವಾಮೀಜಿ ಪೌರುಷ ತೋರಿಸಿಕೊಳ್ಳಲು ಹಾಗೆ ಮಾತನಾಡಿದ್ದಾರೆ. ಕ್ಷಮೆ ಕೇಳಿದ್ದರೆ ಮುಗಿಯುತ್ತಿತ್ತು. ಬಂಡತನ ಬಿಟ್ಟು ಕ್ಷಮೆ ಕೇಳಲಿ. ನಾನೇ ಪಾದ ಮುಟ್ಟಿ ನಮಸ್ಕರಿಸಿ ಅವರನ್ನು ಬರಮಾಡಿಕೊಳ್ಳುತ್ತೇನೆ ಎಂದರು.

ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ

ಸರ್ಕಾರಿ ಶಾಲೆ-ಕಾಲೇಜ್ ಹಾಗೂ ಕಚೇರಿಗಳ ಆವರಣದಲ್ಲಿ ಯಾವುದೇ ಸಂಘಟನೆಗಳಿಗೂ ಅವಕಾಶ ಇಲ್ಲ. ಕೇವಲ ಆರ್‌ಎಸ್‌ಎಸ್ ಮಾತ್ರವಲ್ಲ, ಲಿಂಗಾಯತವಾಗಲಿ, ಅಂಬೇಡ್ಕರ್ ಹೆಸರಿನ ಸಂಘಟನೆಯಾಗಲಿ ಯಾವುದೇ ಧಾರ್ಮಿಕ ಅಥವಾ ಇನ್ನಿತರೆ ಸಂಘಟನೆಗಳಾದರೂ ಅಷ್ಟೆ. ಕಾನೂನು ಎಲ್ಲರಿಗೂ ಅನ್ವಯ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ಈ ದೇಶದಲ್ಲಿ ಆರ್‌ಎಸ್‌ಎಸ್ ಒಂದೇ ಸಂಘಟನೆ ಇದೆಯಾ? ಅಷ್ಟಕ್ಕೂ ಆರ್‌ಎಸ್‌ಎಸ್ ನೋಂದಣಿಯಾಗದ ಸಂಘ. ಆದರೂ ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ದೊಡ್ಡ ದೊಡ್ಡ ಪ್ಯಾಲೇಸ್ ಕಟ್ಟಿದ್ದಾರೆ. ಅದೇ ಕಾಂಗ್ರೆಸ್ ಕಟ್ಟಿದ್ದರೆ? ಪ್ರವಾಹ ಮತ್ತಿತರ ಪ್ರಕೃತಿ ವಿಕೋಪಗಳ ಸಂಭವಿಸಿದಾಗ ರೆಡ್‌ಕ್ರಾಸ್ ಸೇರಿ ಅನೇಕ ಸಂಘಟನೆಗಳು ಶ್ರಮಿಸಿವೆ. ಆರ್‌ಎಸ್‌ಎಸ್ ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಿಲ್ಲ. ಸ್ವಾತಂತ್ರೃ ಸಿಗದೇ ಇದ್ದರೆ ಇವರೆಲ್ಲ ಇಷ್ಟೊಂದು ಮಾತನಾಡುತ್ತಿದ್ದರಾ? ಅಂಬೇಡ್ಕರ್ ಸಂವಿಧಾನ ರಚಿಸದೇ ಹೋಗಿದ್ದರೆ ಮಾತನಾಡುತ್ತಿದ್ದರಾ? ಆರ್‌ಎಸ್‌ಎಸ್ ಬ್ರಿಟಿಷರೊಂದಿಗೆ ಮಿಲಾಪಿಯಾಗಿತ್ತು ಎಂದರು.

ಹಿಂದು ಸಮಾಜ ಒಡೆಯುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ ಅಗ್ರಗಣ್ಯರೆಂಬ ಕೆ.ಎಸ್. ಈಶ್ವರಪ್ಪ ಅವರ ವಿಚಾರಕ್ಕೆ ಸಂಬಂಧಿಸಿದಂತೆ ನೋಕಮೆಂಟ್ಸ್ ಎಂದ ಎಂ.ಬಿ. ಪಾಟೀಲರು, ಈಶ್ವರಪ್ಪ ಅವರನ್ನು ಯಾಕೆ ಬಿಜೆಪಿಯಿಂದ ಹೊರಹಾಕಿದರು? ಲೂಸ್ ಟಾಕ್ ಎಂಬ ಕಾರಣಕ್ಕಲ್ಲವೇ? ಎಂದರು.